ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಸೇರಿದಂತೆ ರೈತರ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾವವಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ '2008ರಿಂದ ಕೇಂದ್ರವು ಕೃಷಿ ಸಾಲ ಮನ್ನಾ ಮತ್ತು ಸಾಲ ಪರಿಹಾರ ಯೋಜನೆಯಡಿ ಯಾವುದೇ ಕೃಷಿ ಸಾಲ ಮನ್ನಾ ಜಾರಿಗೊಳಿಸಿಲ್ಲ' ಎಂದು ತಿಳಿಸಿದ್ದಾರೆ.
ರೈತರ ಸಾಲದ ಹೊರೆ ಕಡಿಮೆ ಮಾಡಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಸೇರಿದಂತೆ ಕೃಷಿಯಲ್ಲಿ ತೊಡಗಿರುವ ಜನರ ಕಲ್ಯಾಣಕ್ಕಾಗಿ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡ ಪ್ರಮುಖ ಉಪಕ್ರಮಗಳನ್ನು ಸಚಿವರು ಪಟ್ಟಿ ಮಾಡಿದ್ದಾರೆ.
3 ಲಕ್ಷದವರೆಗಿನ ಅಲ್ಪಾವಧಿ ಬೆಳೆ ಸಾಲಗಳಿಗೆ ಬಡ್ಡಿ ರಿಯಾಯಿತಿ, ಮೇಲಾಧಾರ ರಹಿತ ಕೃಷಿ ಸಾಲದ ಮಿತಿ 1 ಲಕ್ಷದಿಂದ 1.6 ಲಕ್ಷಕ್ಕೆ ಹೆಚ್ಚಳ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರಿಗೆ ನೀಡುತ್ತಿರುವ ವಾರ್ಷಿಕ 6 ಸಾವಿರ ಆದಾಯ ಬೆಂಬಲಿತ ಯೋಜನೆಗಳನ್ನು ಅವರು ಉಲ್ಲೇಖಿಸಿದ್ದಾರೆ.