ತಿರುವನಂತಪುರಂ: ಕೊರೋನಾದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಗಣತಿಯಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸಲಾಗುವುದು ಎಂದು ಶಿಕ್ಷಣ ಸಚಿವ ವಿ.ಶಿವನಕುಟ್ಟಿ ಹೇಳಿರುವರು. ಆರೋಗ್ಯ ಇಲಾಖೆಯಿಂದ ನೀಡಲಾದ ಲೆಕ್ಕಾಚಾರಗಳ ಪ್ರಕಾರ ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು. ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ತಪ್ಪಾಗಿ ಎಣಿಸಿದ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಇದರ ಬೆನ್ನಿಗೇ ಶಿಕ್ಷಣ ಸಚಿವರು ಪ್ರತಿಕ್ರಿಯೆ ನೀಡಿರುವುದು ಮಹತ್ವದ್ದಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿ ನಿರ್ದೇಶಕರು ಅಧ್ಯಕ್ಷರಾಗಿ ಮತ್ತು ಉಪನಿರ್ದೇಶಕÀರು ಕಾರ್ಯದರ್ಶಿಯಾಗಿರುವ ಸಮಿತಿ ರಚಿಸಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಗೆ ಮಕ್ಕಳ ಹೆಸರುಗಳ ಕುರಿತು ಯಾವುದೇ ಸಂದೇಹಗಳಿದ್ದರೆ, ಅಂತಿಮ ನಿರ್ಧಾರವು ಸಮಿತಿಯದ್ದಾಗಿರುತ್ತದೆ. ಆರೋಗ್ಯ ಇಲಾಖೆಯ ಮಾನದಂಡಗಳಿಗೆ ಅನುಸಾರವಾಗಿ ಶಿಕ್ಷಣ ಇಲಾಖೆಗೆ ದೂರುಗಳನ್ನು ಸಹ ನೀಡಬಹುದು. ಶಿಕ್ಷಣ ಇಲಾಖೆಯು ಈ ವಿಷಯವನ್ನು ಆರೋಗ್ಯ ಇಲಾಖೆಗೆ ವಹಿಸುತ್ತದೆ ಎಂದು ವಿ ಶಿವನಕುಟ್ಟಿ ಹೇಳಿದರು.
ಆರೋಗ್ಯ ಮತ್ತು ಮಹಿಳಾ- ಮಕ್ಕಳ ಅಭಿವೃದ್ಧಿ ಇಲಾಖೆಯು ಕೊರೋನಾದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ಹಣಕಾಸಿನ ನೆರವು ನೀಡಲು 3,19,99,000 ರೂಗಳನ್ನು ಮೀಸಲಿರಿಸಿದೆ. ಮಗುವಿಗೆ 18 ವರ್ಷ ತುಂಬುವವರೆಗೆ ತಿಂಗಳಿಗೆ ರೂ .2,000 ನಿಶ್ಚಿತ ಠೇವಣಿಯನ್ನು ಅನುಮತಿಸಲಾಗುತ್ತದೆ. ಈ ಹಿಂದೆ, ಸಚಿವೆ ವೀಣಾ ಜಾರ್ಜ್ ಅವರು ಮಕ್ಕಳ ಪದವಿ ಹಂತದವರೆಗಿನ ಶಿಕ್ಷಣ ವೆಚ್ಚವನ್ನು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಯಿಂದ ಭರಿಸಲಾಗುವುದು ಎಂದು ಹೇಳಿದ್ದರು.