ಲೂಧಿಯಾನ: ಪಂಜಾಬ್‌ನ ವರ್ತಕರ ಸಂಘಟನೆಯು ಹೊಸ ರಾಜಕೀಯ ಪಕ್ಷವೊಂದನ್ನು ರಚಿಸಿದ್ದು, ಭಾರತೀಯ ಕಿಸಾನ್ ಯೂನಿಯನ್ (ಚದೂನಿ) ಮುಖ್ಯಸ್ಥ ಗುರ್ನಾಮ್ ಸಿಂಗ್ ಚದೂನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ನೂತನ ಪಕ್ಷಕ್ಕೆ 'ಭಾರತೀಯ ಆರ್ಥಿಕ ಪಾರ್ಟಿ' ಎಂದು ಹೆಸರಿಡಲಾಗಿದ್ದು, ರೈತರು, ವರ್ತಕರು ಹಾಗೂ ಕಾರ್ಮಿಕರ ಧ್ವನಿಯಾಗಲಿದೆ ಎಂದು ಪಕ್ಷದ ಸಂಸ್ಥಾಪಕರು ಹೇಳಿದ್ದಾರೆ.
ವರ್ತಕರ ವಿವಿಧ ಸಂಘಟನೆಗಳ ಪ್ರತಿನಿಧಿಗಳ ಸಭೆ ಚದೂನಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ವರ್ತಕರ ಸಂಘದ ಅಧ್ಯಕ್ಷ ತರುಣ್ ಬಾವಾ ಅವರನ್ನು ನೂತನ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.
ಚದೂನಿಯವರು ನೂತನ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿಲ್ಲ. ಆದರೆ, ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಸಭೆಯಲ್ಲಿ ಅವರು ಉಪಸ್ಥಿತರಿದ್ದರು.
ಮುಂದಿನ ವರ್ಷ ಪಂಜಾಬ್ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇನ್ನೊಂದೆಡೆ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ, ನೂತನ ಪಕ್ಷವೊಂದು ಅಸ್ತಿತ್ವಕ್ಕೆ ಬಂದಿರುವುದಕ್ಕೆ ಮಹತ್ವ ಬಂದಿದೆ.
ಸಭೆ ನಂತರ ಮಾತನಾಡಿದ ಚದೂನಿ, 'ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಎಲ್ಲ 117 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಲಾಗಿದೆ' ಎಂದರು.
'ವರ್ತಕರು, ರೈತರು ಹಾಗೂ ಕಾರ್ಮಿಕರನ್ನು ಈ ಹಿಂದಿನ ಕಾಂಗ್ರೆಸ್ ಹಾಗೂ ಬಿಜೆಪಿ ನೇತೃತ್ವ ಸರ್ಕಾರಗಳು ನಿರ್ಲಕ್ಷಿಸಿವೆ. ಇವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನೂತನ ಪಕ್ಷ ಶ್ರಮಿಸುವ ವಿಶ್ವಾಸವಿದೆ' ಎಂದು ಹೇಳಿದರು.
'ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿವಿಧ ಸಂಘಟನೆಗಳು ಒಟ್ಟಾಗಿ, ಚುನಾವಣೆ ಎದುರಿಸಬೇಕು' ಎಂದು ಚದೂನಿ ಇತ್ತೀಚೆಗೆ ಹೇಳಿದ್ದರು.
'ಮಿಷನ್ ಪಂಜಾಬ್' ಎಂಬ ಪರಿಕಲ್ಪನೆ ಮುಂದಿಟ್ಟಿದ್ದ ಅವರು, 'ಹೊಸ ರಾಜಕೀಯ ಪಕ್ಷದ ಮೂಲಕ ವ್ಯವಸ್ಥೆಯನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಈ ಪರಿಕಲ್ಪನೆ ಮಾದರಿಯಾಗಲಿದೆ' ಎಂದಿದ್ದರು.