ಕಾಸರಗೋಡು: ಸರಕಾರದ ಆಡಳಿತೆ ಮಂಜೂರಾತಿ ಲಭಿಸಿ, ಟೆಂಡರ್ ಕ್ರಮಗಳು ಪೂರ್ತಿಗೊಂಡ ಚಟುವಟಿಕೆಗಳ ವಿಳಂಬ ಕ್ರಮವನ್ನು ಕರಾರುದಾರರು ಕೈಬಿಡಬೇಕು ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಆಗ್ರಹಿಸಿದರು. ಕೆಲವೆಡೆ ಟೆಂಡರ್ ನಡೆದ ನಂತರವೂ ಕರಾರುದಾರರ ಉದಾಸೀನತೆಯಿಂದ ನಿರ್ಮಾಣ ಆರಂಭವಾಗದಿರುವ ಉದಾಹರಣೆಗಳೂ ಇವೆ ಎಂದವರು ಆರೋಪಿಸಿದರು.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಕಾಸರಗೋಡು ಶಾಸಕರ ಸ್ಥಳೀಯ ಅಭಿವೃದ್ಧಿ ನಿಧಿ ಚಟುವಟಿಕೆಗಳ ಅವಲೋಕನ ಸಭೆಯಲ್ಲಿ ಅವರು ಈ ವಿಚಾರ ಪ್ರಕಟಿಸಿದರು.
ಡಾಮರೀಕರಣ ಪೂರ್ಣಗೊಳ್ಳದೇ ಇರುವ ರಸ್ತೆಗಳಲ್ಲಿ ಮಳೆ ಕಡಿಮೆಯಾದ ನಂತರ ಕಾಮಗಾರಿ ಮುಂದುವರಿಸಲಾಗುವುದು ಎಂದು ಕೆಲವು ಕರಾರುದಾರರು ತಿಳಿಸಿದ್ದಾರೆ. ಅವರಿಗೆ ಸಮಯಾವಕಾಶ ನೀಡಬಹುದಾದರೂ, ನಂತರವೂ ಉದಾಸೀನತೆ ತೋರಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್ಚರಿಕೆ ನೀಡಿದರು.
ಕರೆಯಲಾಗಿದ್ದರೂ ಯಾವ ಕರಾರುದಾರರೂ ಸಭೆಗೆ ಹಾಜರಾಗಿರಲಿಲ್ಲ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅವಲೋಕನ ನಡೆಸಿದರು. ಹಣಕಾಸು ಅಧಿಕಾರಿ ಕೆ.ಸತೀಶನ್, ಎ.ಡಿ.ಸಿ.(ಜನರಲ್) ನಿಫಿ.ಎಸ್.ಹಕ್, ಬಿ.ಡಿ.ಒ.ಡಾ.ಅನುಪಂ ಎಸ್., ಸ್ಥಳೀಯಾಡಳಿತ ಸಂಸ್ಥೆ ಇಲಾಖೆ ಇಂಜಿನಿಯರ್ ಗಳು ಮೊದಲಾದವರು ಉಪಸ್ಥಿತರಿದ್ದರು.