ನವದೆಹಲಿ, ಆಗಸ್ಟ್ 17: ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಕೊರೊನಾ ಕ್ಷಿಪ್ರ ಪರೀಕ್ಷೆಯ ಆರ್‌ಟಿಪಿಸಿಆರ್ ಪರೀಕ್ಷಾ ಕಿಟ್‌ಗಳ ರಫ್ತನ್ನು ನಿರ್ಬಂಧಿಸಿದೆ.
ದೇಶದಲ್ಲಿ ಸಂಭವನೀಯ ಮೂರನೇ ತರಂಗದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬದಲಾದ ಮಾನದಂಡಗಳ ಅಡಿಯಲ್ಲಿ ರಾಪಿಡ್ ಆಂಟಿಜೆನ್ ಪರೀಕ್ಷಾ ಕಿಟ್‌ಗಳ ರಫ್ತುದಾರರು ದೇಶದ ಹೊರಗೆ ವಸ್ತುಗಳನ್ನು ಮಾರಾಟ ಮಾಡಲು ಡಿಜಿಎಫ್‌ಟಿಯಿಂದ ಪರವಾನಗಿ ಅಥವಾ ಅನುಮತಿ ಪಡೆಯಬೇಕಾಗುತ್ತದೆ. ದೇಶೀಯ ಬಳಕೆಗೆ ಆದ್ಯತೆ ನೀಡಬೇಕಾದ ಅಗತ್ಯಇಂಥ ನಿಷೇಧಗಳ ಹಿಂದಿನ ಕಾರಣ ಎಂದು ಉಲ್ಲೇಖಿಸಲಾಗಿದೆ.
"ಕೊರೊನಾ ಕ್ಷಿಪ್ರ ಪರೀಕ್ಷಾ ಕಿಟ್‌ಗಳ ರಫ್ತನ್ನು ನಿರ್ಬಂಧಿತ ವರ್ಗಕ್ಕೆ ಒಳಪಡಿಸಲಾಗಿದೆ. ಇದು ತಕ್ಷಣದಿಂದ ಜಾರಿಗೆ ಬರಲಿದೆ" ಎಂದು ವಿದೇಶಿ ವ್ಯಾಪಾರದ ನಿರ್ದೇಶನಾಲಯ (ಡಿಜಿಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕೊರೊನಾ ರೋಗಲಕ್ಷಣವಿರುವ ರೋಗಿಗಳಿಗೆ ಮತ್ತು ಕೊರೊನಾ ದೃಢಪಟ್ಟವರಿಗೆ ಮನೆಯಲ್ಲಿಯೇ ಪರೀಕ್ಷೆ ನಡೆಸಲು ಕಿಟ್‌ಗಳನ್ನು ಬಳಕೆ ಮಾಡುವಂತೆ ಮೇ 19ರಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಲಹೆ ನೀಡಿತ್ತು.
ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಅಲ್ಲಿ ಸೋಂಕಿನ ತ್ವರಿತ ಪತ್ತೆಗೆ ಈ ಕಿಟ್‌ಗಳನ್ನು ಬಳಕೆ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು.
ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳು ಏರುಗತಿಯಲ್ಲಿ ಸಾಗಿದೆ. ಮಂಗಳವಾರ ಈ ಸಂಖ್ಯೆ ಇಳಿಮುಖವಾಗಿದೆ. 154 ದಿನಗಳ ನಂತರ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ಮಂಗಳವಾರ 25,166 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,69,846ಕ್ಕೆ ಇಳಿಕೆಯಾಗಿದೆ. ಸದ್ಯಕ್ಕೆ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ 97.51% ಇದೆ.
ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 3,22,25,513 ಆಗಿದ್ದು, ಸೋಂಕಿನಿಂದ ಒಟ್ಟು 4,31,642 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೂ 3,14,11,924 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 54,58,57,108 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ.
ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿರುವ ಪರಿಣಾಮ, ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 1.18% ಇದೆ. ಇದರೊಂದಿಗೆ, ಕೊರೊನಾ ಸೋಂಕಿನ ಚೇತರಿಕೆ ದರ ಇದೀಗ 97.48%ಗೆ ಸುಧಾರಣೆ ಕಂಡಿದೆ. 2020 ಮಾರ್ಚ್ ನಿಂದ ಕಂಡುಬಂದಿರುವ ಅತ್ಯಂತ ಗರಿಷ್ಠ ದರ ಇದಾಗಿದೆ. ವಾರದ ಪಾಸಿಟಿವಿಟಿ ದರ 5% ಮಟ್ಟದಿಂದ ಕೆಳಗಿದ್ದು, ಪ್ರಸ್ತುತ ಅದೀಗ 2.01%ಗೆ ಇಳಿಕೆ ಕಂಡಿದೆ. ದೈನಂದಿನ ಪಾಸಿಟಿವಿಟಿ ದರ 2.79%ಗೆ ಇಳಿಕೆ ಕಂಡಿದ್ದು, ಸತತ 21 ದಿನಗಳಿಂದ 3% ಮಟ್ಟದಿಂದ ಕೆಳಗಿದೆ.ಸಾಂಕ್ರಾಮಿಕ ಪ್ರಾರಂಭವಾದ ನಂತರ ಇದುವರೆಗೂ ಭಾರತ ಸಾಧಿಸಿದ ಗರಿಷ್ಠ ಚೇತರಿಕೆ ದರ ಇದಾಗಿದೆ.
ಈ ನಡುವೆ ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸೋಮವಾರ ಮತ್ತೆ ಹತ್ತು ಹೊಸ ಪ್ರಕರಣಗಳು ದಾಖಲಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದುವರೆಗೂ ರಾಜ್ಯದಲ್ಲಿ ದಾಖಲಾದ ಒಟ್ಟು ಡೆಲ್ಟಾ ಪ್ಲಸ್ ಪ್ರಕರಣಗಳ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. 76 ರೋಗಿಗಳಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.
ಡೆಲ್ಟಾ ಪ್ಲಸ್ ಪ್ರಕರಣಗಳಿಂದ ದೇಶದಲ್ಲಿ ಮೂರನೇ ಅಲೆ ಆತಂಕ ಎದುರಾಗಿದೆ.