ಕಾಸರಗೋಡು: ಜಿಲ್ಲೆಯಲ್ಲಿ ಸುಸೂತ್ರ ಮತ್ತು ಪರಿಣಾಮಕಾರಿ ಕೋವಿಡ್ ಪ್ರತಿರೋಧ ಚುಚ್ಚುಮದ್ದಿಗಾಗಿ ಪ್ರತ್ಯೇಕ ಆ್ಯಕ್ಷನ್ ಪ್ಲಾನ್ ಸಿದ್ಧಗೊಂಡಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ವಾಕ್ಸಿನೇಷನ್ ಕೇಂದ್ರಗಳಲ್ಲಿ ಆ.9ರಿಂದ ವಾಕ್ಸಿನ್ ವಿತರಣೆಗೆ ಶೇ 50 ಆನ್ ಲೈನ್ ಮೂಲಕದ ನೋಂದಣಿ, ಶೇ 50 ಆಫ್ ಲೈನ್ ನೋಂದಣಿ ಇರುವುದು. ಆನ್ ಲೈನ್ ನೋಂದಣಿ ನಡೆಸುವವರು ತಮ್ಮ ಪಂಚಾಯಿತಿಯ ಲಸಿಕೆ ಕೇಂದ್ರವನ್ನು ಮಾತ್ರ ಆಯ್ಕೆ ಮಾಡಬೇಕು. ಆನ್ ಲೈನ್ ಬುಕ್ಕಿಂಗ್ ಮೂಲಕ ಆಗಮಿಸುವವರು ಅದೇ ಪಂಚಾಯಿತಿಯ ನಿವಾಸಿಗಳೆಂದು ಖಚಿತಪಡಿಸುವ ಯಾವುದಾದರೂ ಸಾಕ್ಷ್ಯಾಧಾರ ಹಾಜರುಪಡಿಸಬೇಕು. ಶೇ 50 ಆಫ್ ಲೈನ್ ಮೂಲಕದ ನೋಂದಣಿಯಲ್ಲಿ ಶೇ. 20 ದ್ವಿತೀಯ ಝೋನ್ ಗಾಗಿ ಮೀಸಲಿರಿಸಲಾಗುವುದು. ಆಫ್ ಲೈನ್ ನಲ್ಲಿ ಬಾಕಿಯುಳಿಯುವ ಶೇ 80 ಆದ್ಯತೆ ಗುಂಪುಗಳನ್ನು ವಾರ್ಡ್ ವಿಂಗಡಿಸಿ ಆರೋಗ್ಯ ಕಾರ್ಯಕರ್ತರು ನಿಗದಿಪಡಿಸುವರು. ಆದ್ಯತೆ ಗುಂಪುಗಳಲ್ಲಿ 60 ವರ್ಷ ಪ್ರಾಯ ದಾಟಿದವರು, ವಿಶೇಷ ಚೇತನರು, ಪರಿಶಿಷ್ಟ ಜಾತಿ-ಪಂಗಡ ಜನಾಂಗದವರು, ರಾಜ್ಯದಿಂದ ಹೊರಗಡೆ ಕಲಿಕೆ ನಡೆಸುತ್ತಿರುವವರು, ವಲಸೆಗಾರರು ಮೊದಲಾದವರು ಸೇರಿದ್ದಾರೆ. ಆದ್ಯತೆ ಗುಂಪುಗಳ ನಂತರ 18 ಕ್ಕಿಂತ ಅಧಿಕ ವಯೋಮಾನದ ಮಂದಿಗೆ ವಾಕ್ಸಿನ್ ನೀಡಲಾಗುವುದು. ಜಿಲ್ಲೆಯ ಪ್ರತಿ ಸಂಸ್ಥೆಗೆ ವಿತರಿಸುವ ಎಲ್ಲ ವ್ಯಾಕ್ಸಿನ್‍ಗಳು ಎರಡು ದಿನಗಳಲ್ಲಿ ಪೂರ್ಣರೂಪದಲ್ಲಿ ಬಳಕೆಯಾಗುವ ರೀತಿ ಚುಚ್ಚುಮದ್ದು ನೀಡಿಕೆಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಆಕ್ಷನ್ ಪ್ಲಾನ್ ನಲ್ಲಿ ತಿಳಿಸಲಾದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ವೈದ್ಯಾಧಿಕಾರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ವ್ಯಾಕ್ಸಿನ್ ನೀಡಿಕೆಯಲ್ಲಿ ಸ್ವಜನಪಕ್ಷಪಾತಕ್ಕೆ ಅನುಮತಿ ನೀಡುವುದಿಲ್ಲ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಲ್ಲಿ ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಕಾನೂನು ಭಂಗ ಘಟನೆಗಳು ನಡೆದಲ್ಲಿ ಪೆÇಲೀಸರ ಸಹಾಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.