ಆಹಾರ ಪದಾರ್ಥಗಳು, ಹಣ್ಣು-ತರಕಾರಿಗಳು ದೀರ್ಘಕಾಲ ಬಳಕೆಗೆ ಬರಬೇಕೆಂದು ಅವುಗಳನ್ನು ರಿಫ್ರಿಜರೇಟರ್ ನಲ್ಲಿ ಸಂಗ್ರಹಿಸುತ್ತಾರೆ. ಇದರಿಂದ ಆಹಾರಪದಾರ್ಥಗಳು ಅಷ್ಟು ಬೇಗನೆ ಕೆಡುವುದಿಲ್ಲ. ಆದರೆ ಎಲ್ಲಾ ಪದಾರ್ಥಗಳನ್ನು ರಿಫ್ರಿಜರೇಟರ್ ನಲ್ಲಿ ಇಡುವುದು ಒಳ್ಳೆಯದಲ್ಲ. ಏಕೆಂದರೆ ಇದರಿಂದ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅಂತಹ ಪದಾರ್ಥಗಳಲ್ಲಿ ಮಾವಿನ ಹಣ್ಣು ಮತ್ತು ಕಲ್ಲಂಗಡಿ ಮುಖ್ಯಸ್ಥಾನದಲ್ಲಿ ನಿಲ್ಲುತ್ತದೆ.
ಈ ಎರಡೂ ಆಹಾರ ಪದಾರ್ಥಗಳನ್ನು ಎಂದಿಗೂ ರೆಫ್ರಿಜರೇಟರ್‌ನಲ್ಲಿ ಇಡಬಾರದು. ಯಾಕೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ, ನೀವೇ ಓದಿ, ತಿಳಿಯುತ್ತೆ.ಪರಿಮಳ, ರುಚಿ ಬದಲಾಯಿಸಬಹುದು: ಕಲ್ಲಂಗಡಿ ಮತ್ತು ಮಾವಿನ ಹಣ್ಣುಗಳನ್ನು ಜನರು ಸಾಮಾನ್ಯವಾಗಿ ತೊಳೆದು ರೆಫ್ರಿಜರೇಟರ್‌ನಲ್ಲಿ ಇಡುತ್ತಾರೆ. ಆದರೆ ಇದು ಹಣ್ಣಿನ ರುಚಿಯ ಮೇಲೆ ಪ್ರಭಾವ ಬೀರುತ್ತದೆ. ಮುಖ್ಯವಾಗಿ ಕಲ್ಲಂಗಡಿಯನ್ನು ಕತ್ತರಿಸದೇ, ಎಂದಿಗೂ ಫ್ರಿಜ್ನಲ್ಲಿ ಇಡಬಾರದು. ಕಲ್ಲಂಗಡಿಯನ್ನು ಕತ್ತರಿಸದೇ ರೆಫ್ರಿಜರೇಟರ್ ನಲ್ಲಿ ಶೇಖರಿಸಿಡುವುದರಿಂದ "ಸೆಲ್ ಡ್ಯಾಮೇಜ್" ಉಂಟಾಗುತ್ತದೆ. ಇದರಿಂದ ಹಣ್ಣಿನ ರುಚಿ ಮತ್ತು ಬಣ್ಣವನ್ನು ಬದಲಾಗಬಹುದು. ಇದಲ್ಲದೆ, ಫ್ರಿಜ್ ನಲ್ಲಿ ಇಡೀ ಹಣ್ಣನ್ನು ಇಟ್ಟರೆ, ಹಣ್ಣಿನ ಒಳಗೆ ಬ್ಯಾಕ್ಟೀರಿಯಾ ಬೆಳೆಯುವ ಅಪಾಯವಿದೆ. ಒಂದು ವೇಳೆ ಅದನ್ನು ರೆಫ್ರಿಜರೇಟರ್‌ನಲ್ಲಿ ಇಡಲು ಬಯಸಿದರೆ, ಮೊದಲು ಅದನ್ನು ಕತ್ತರಿಸಿ ನಂತರ ಒಳಗೆ ಇಡಿ.
ಹಾಳಾಗುವ ಅಪಾಯ: ಬೇಸಿಗೆಯಲ್ಲಿ, ಕಲ್ಲಂಗಡಿ ಮತ್ತು ಮಾವು ಎರಡು ಜನಪ್ರಿಯ ಹಣ್ಣುಗಳು. ಎರಡೂ ಹಣ್ಣುಗಳಲ್ಲಿ ಹೆಚ್ಚಿನ ನೀರಿನ ಅಂಶವಿರುವುದರಿಂದ, ಅವು ನಮ್ಮನ್ನು ಬಿಸಿಲಿನ ಬೇಗೆಯಿಂದ ರಕ್ಷಿಸುತ್ತವೆ ಮತ್ತು ತೇವಾಂಶದಿಂದ ಕೂಡಿರುವಂತೆ ಮಾಡುತ್ತವೆ. ತಜ್ಞರ ಪ್ರಕಾರ ಮಾವಿನಹಣ್ಣು ಮತ್ತು ಕಲ್ಲಂಗಡಿ ಹಣ್ಣುಗಳನ್ನು ಫ್ರಿಜ್ ನಿಂದ ಹೊರಗಿಡಬೇಕು, ಏಕೆಂದರೆ ಕಡಿಮೆ ತಾಪಮಾನದಲ್ಲಿ ಕೊಳೆಯುವ ಸಾಧ್ಯತೆ ಹೆಚ್ಚು.
ಹಣ್ಣುಗಳು ಮತ್ತು ತರಕಾರಿಗಳನ್ನು ಪ್ರತ್ಯೇಕವಾಗಿಡಬೇಕು: ಒಂದೇ ಕಪಾಟಿನಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಹಾಕುವುದು ಉತ್ತಮ ಉಪಾಯವಲ್ಲ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಎಲ್ಲಾ ಸಮಯದಲ್ಲೂ ಅವುಗಳನ್ನು ಪ್ರತ್ಯೇಕ ಬುಟ್ಟಿಗಳಲ್ಲಿ ಪ್ರತ್ಯೇಕವಾಗಿ ಜೋಡಿಸಿಡಿ. ಏಕೆಂದರೆ, ಅವುಗಳು ವಿವಿಧ ಅನಿಲಗಳನ್ನು ಹೊರಹಾಕುತ್ತವೆ. ಹೀಗಿದ್ದಾಗ ಅವುಗಳನ್ನು ಒಟ್ಟಿಗೆ ಸಂಗ್ರಹಿಸುವುದರಿಂದ ಅವುಗಳ ರುಚಿ. ಗುಣಮಟ್ಟದ ಮೇಲೆ ಪ್ರಭಾವ ಬೀರಬಹುದು.
ಕತ್ತರಿಸಿದ ಹಣ್ಣುಗಳನ್ನು ಎಂದಿಗೂ ಹೊರಗೆ ಇಡಬೇಡಿ: ಕತ್ತರಿಸಿದ ಹಣ್ಣುಗಳನ್ನು ತೆರೆದ ಸ್ಥಳದಲ್ಲಿ ಇಡುವುದು ಒಳ್ಳೆಯದಲ್ಲ. ಇಡೀ ಹಣ್ಣನ್ನು ಫ್ರಿಜ್ ನಲ್ಲಿ ಇಡಬಾರದು ಹೇಗೋ, ಹಾಗೇ ಕತ್ತರಿಸಿದ ಹಣ್ಣನ್ನು ಹೊರಗೆ ಇಡಬಾರದು. ಅವುಗಳನ್ನು ಖರೀದಿಸಿದ ನಂತರ, ಕೋಣೆಯ ಉಷ್ಣಾಂಶದಲ್ಲಿ ಇಡುವ ಮೊದಲು ಸ್ವಲ್ಪ ತಣ್ಣನೆಯ ನೀರಿನಲ್ಲಿ ನೆನೆಸಿಡಿ. ನಂತರ ತಿನ್ನುವ ಕೆಲವು ನಿಮಿಷಗಳ ಮೊದಲು ಅವುಗಳನ್ನು ಕತ್ತರಿಸಿ, ಫ್ರಿಜ್ ನಲ್ಲಿ ಇಡಿ. ಕತ್ತರಿಸಿದ ಹಣ್ಣುಗಳನ್ನು ಮುಚ್ಚಿಡಲು ಮರೆಯದಿರಿ. ಅವುಗಳನ್ನು ಎಂದಿಗೂ ತೆರೆದಿಡಬಾರದು.