ಡೆಹ್ರಾಡೂನ್: ದೇಶದ ಅತಿ ಎತ್ತರದ ಪ್ರದೇಶವಾದ (ಸಮುದ್ರ ಮಟ್ಟದಿಂದ 11 ಸಾವಿರ ಅಡಿ ಎತ್ತರ) ಉತ್ತರಾಖಂಡ ರಾಜ್ಯದ, ಚಮೋಲಿ ಜಿಲ್ಲೆಯ ಮನಾ ಗ್ರಾಮದಲ್ಲಿ ಅಪರೂಪದ ಔಷಧೀಯ ಸಸ್ಯಗಳ ಉದ್ಯಾನವನ್ನು ಇತ್ತೀಚೆಗೆ ಉದ್ಘಾಟಿಸಲಾಗಿದೆ.
ಮನಾ ವನ ಪಂಚಾಯತ್ ನೀಡಿದ ಮೂರು ಎಕರೆ ಭೂಮಿಯಲ್ಲಿ ಉತ್ತರಾಖಂಡದ ಅರಣ್ಯ ಇಲಾಖೆಯ ಸಂಶೋಧನಾ ವಿಭಾಗವು ಈ ಔಷಧೀಯ ಉದ್ಯಾನವನ್ನು ಅಭಿವೃದ್ಧಿಪಡಿಸಿದೆ. ಕೇಂದ್ರ ಸರ್ಕಾರದ 'ಕಾಂಪಾ(ಸಿಎಎಂಪಿಎ) ಯೋಜನೆ' ಅಥವಾ 'ಪರ್ಯಾಯ ಅರಣ್ಯೀಕರಣ ನಿಧಿ ಕಾಯಿದೆ' ಅಡಿ ಈ ಔಷಧೀಯ ವನ ನಿರ್ಮಾಣವಾಗಿದೆ.
ಭಾರತ - ಚೀನಾ ಗಡಿಗೆ ಹತ್ತಿರವಿರುವ, ಹಿಮಾಲಯದ ತಪ್ಪಲಿನಲ್ಲಿನ ಪ್ರಸಿದ್ಧ ಬದ್ರಿನಾಥ ದೇವಾಲಯದ ಸಮೀಪದಲ್ಲಿರುವ ಈ ಉದ್ಯಾನದಲ್ಲಿ 40 ವಿಧದ ಸಸ್ಯ ಪ್ರಭೇದಗಳಿವೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಸಂಜೀವ್ ಚತುರ್ವೇದಿ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಂಘಟನೆ (ಐಯುಸಿಎನ್) ಹಾಗೂ ರಾಜ್ಯ ಜೀವವೈವಿಧ್ಯ ಮಂಡಳಿ ಗುರುತಿಸಿರುವ ಅಪಾಯ ಹಾಗೂ ಅಳಿವಿನಂಚಿನಲ್ಲಿರುವ ಔಷಧೀಯ ಸಸ್ಯಗಳನ್ನು ಈ ಉದ್ಯಾನದಲ್ಲಿ ಸಂರಕ್ಷಿಸಲಾಗಿದೆ ಎಂದು ಅವರು ತಿಳಿಸಿದರು.