ನವದೆಹಲಿ: ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಕೂಡ ಆರೋಗ್ಯದಲ್ಲಿ ಹಲವು ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಕೊರೊನಾ ನಂತರ ದೈಹಿಕ, ಮಾನಸಿಕ ಸ್ಥಿತಿಗತಿಗಳಲ್ಲಿ ಕೆಲವು ಬದಲಾವಣೆಗಳಾಗುತ್ತಿರುವುದು ಕಂಡುಬರುತ್ತಿದೆ.
ಕೊರೊನಾದಿಂದ ಗುಣಮುಖರಾಗಿ ಹಲವು ದಿನಗಳ ನಂತರವೂ ಸೋಂಕಿನ ಪ್ರಭಾವ ಮಾತ್ರ ದೇಹವನ್ನು ಬಿಟ್ಟು ಹೋಗುತ್ತಿಲ್ಲ. ಸುಸ್ತು, ತಲೆತಿರುಗುವಿಕೆ, ಬಲಹೀನತೆ, ಯಾವುದೇ ಕೆಲಸ ಮಾಡಲು ಆಸಕ್ತಿ ಇಲ್ಲದಿರುವಿಕೆ ಕಂಡುಬರುತ್ತಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಈ ಲಕ್ಷಣಗಳು ಕಂಡುಬರುತ್ತಿವೆ.
ಈ ರೀತಿ ಕೊರೊನಾ ನಂತರ ಸಮಸ್ಯೆಗಳನ್ನು ಹೊತ್ತು ಬರುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದಾಗಿ ಪಾಟ್ನಾದ ಏಮ್ಸ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಕೊರೊನಾ ನಂತರ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ, ಸಲಹೆಗಳನ್ನು ನೀಡಲೆಂದೇ ಪ್ರತ್ಯೇಕ ಕೇಂದ್ರವನ್ನು ಅಲ್ಲಿ ತೆರೆಯಲಾಗಿದೆ.
ಕೊರೊನಾ ನಂತರ ಕಾಣಿಸಿಕೊಳ್ಳುತ್ತಿರುವ ಸಮಸ್ಯೆ
ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಸುಸ್ತು, ಬಲಹೀನತೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗುತ್ತಿದೆ. ಸೋಂಕಿನಿಂದ ಗುಣಮುಖರಾದ ನಂತರವೂ, ನಡೆದಾಡಿದರೆ ಸುಸ್ತಾಗುವುದು, ದಿನನಿತ್ಯದ ಕೆಲಸ ಮಾಡಲು ಸಾಧ್ಯವಾಗದೇ ಇರುವ ಸಮಸ್ಯೆ ಕಂಡುಬರುತ್ತಿದೆ. ಇದು ಒಬ್ಬಿಬ್ಬರ ಸಮಸ್ಯೆಯಲ್ಲ, ಹಲವು ಮಂದಿಯಲ್ಲಿ ಇದೇ ಸಮಸ್ಯೆಗಳು ಗೋಚರಿಸುತ್ತಿವೆ. ಈ ಪ್ರಕರಣಗಳಲ್ಲಿ ಕೆಲವರಿಗೆ ಆಕ್ಸಿಜನ್ ಥೆರಪಿ ನೀಡಲಾಗುತ್ತಿದೆ.
ತಲೆ ತಿರುಗುವಿಕೆ, ಆಯಾಸ...
'ಯುವಜನರಲ್ಲಿ ಸುಸ್ತು ಸಾಮಾನ್ಯವಾದರೆ, ವಯಸ್ಸಾದವರಲ್ಲಿ ಸುಸ್ತಿನೊಂದಿಗೆ ಮರೆವು ಕೂಡ ಕಾಡುತ್ತಿದೆ. ಆಯಾಸ, ತಲೆ ತಿರುಗುವಿಕೆ, ಸುಸ್ತು, ಬಲಹೀನತೆ ಕಾಣಿಸಿಕೊಳ್ಳುತ್ತಿದೆ. ಈ ಸಮಸ್ಯೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ' ಎಂದು ಏಮ್ಸ್ ಪಾಟ್ನಾದ ಜಂಟಿ ಪ್ರಾಧ್ಯಾಪಕ ಡಾ. ಸಂಜಯ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಈ ಲಕ್ಷಣಗಳು ಸಾಮಾನ್ಯವಾಗಿವೆ. ಹಾಗೆಂದು ನಿರ್ಲಕ್ಷಿಸುವಂತಿಲ್ಲ. ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳಬೇಕು. ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ತಜ್ಞರ ಸಲಹೆಯ ವ್ಯಾಯಾಮಗಳನ್ನು ಮಾಡುವುದು ಅವಶ್ಯಕ. ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಸ್ವಾಸ್ಥ್ಯವನ್ನೂ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಹೀಗಿದ್ದಾಗ ಕೆಲವು ದಿನಗಳಲ್ಲೇ ಈ ಸಮಸ್ಯೆಗಳಿಂದಲೂ ಹೊರಬರಲು ಸಾಧ್ಯವಿದೆ. ನಿರಂತರ ತಪಾಸಣೆಗೊಳಗಾಗುವುದನ್ನು ಮರೆಯಬೇಡಿ.ಮನೆಯಲ್ಲಿಯೂ ವಾತಾವರಣ ರೋಗಿಗಳಿಗೆ ಪೂರಕವಾಗಿರಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಪ್ರತಿ ಮೂರರಲ್ಲಿ ಇಬ್ಬರಿಗೆ ಈ ಸಮಸ್ಯೆ'
ಪ್ರತಿ ಮೂರರಲ್ಲಿ ಇಬ್ಬರು ರೋಗಿಗಳು ಈ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬರುತ್ತಿದ್ದಾರೆ. ಅವರಲ್ಲಿ ಕೆಲವರಿಗೆ ಆಮ್ಲಜನಕ ಮಟ್ಟದಲ್ಲಿ ತೊಂದರೆಯಾಗುವುದು ಕೂಡ ಕಂಡುಬರುತ್ತಿದೆ. ಹೀಗಾಗಿ ಕೊರೊನಾ ನಂತರ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆಂದೇ ಆಸ್ಪತ್ರೆಯಲ್ಲಿ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಸಮಸ್ಯೆ ಕಾಣಿಸಿಕೊಂಡವರು ತಜ್ಞರ ಸಲಹೆ ಪಡೆಯಲೇಬೇಕಿದೆ' ಎಂದು ವೈದ್ಯ ಸಂಜಯ್ ಹೇಳುತ್ತಾರೆ.
ತಲೆನೋವು, ಕೂದಲು ಉದುರುವಿಕೆ, ನಿದ್ರಾಹೀನತೆ ಕಾಡುತ್ತಿದೆ
ಸೋಂಕಿನಿಂದ ಗುಣಮುಖರಾದ ನಂತರ ಅವರಲ್ಲಿ ದೀರ್ಘಕಾಲ ಈ ಸಮಸ್ಯೆಗಳು ಕಾಡುತ್ತಿವೆ. ಸಮಸ್ಯೆ ಗಂಭೀರ ಸ್ವರೂಪದವರಿಗೆ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗುತ್ತದೆ. ನಾಲ್ಕರಿಂದ ಆರು ವಾರಗಳ ನಂತರ ಮತ್ತೆ ಅವರು ಗುಣಮುಖರಾಗುತ್ತಿದ್ದಾರೆ. ಕೊರೊನಾ ನಂತರ 43% ಮಂದಿಯಲ್ಲಿ ಅನವಶ್ಯಕ ಆತಂಕ ಹೆಚ್ಚಾಗಿರುವುದು ಕಂಡುಬಂದಿದೆ. 36% ಮಂದಿಯಲ್ಲಿ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ ತಿಳಿಸಿದ್ದಾರೆ. ಇದರ ಹೊರತಾಗಿ ತಲೆ ನೋವು, ತೂಕ ಕಡಿಮೆಯಾಗುವುದು, ಕೂದಲು ಉದುರುವಿಕೆ, ನಿದ್ರಾಹೀನತೆ, ಉಸಿರಾಟದಲ್ಲಿ ತೊಂದರೆ ಸಮಸ್ಯೆ ಹೊತ್ತು ಬರುವ ರೋಗಿಗಳೂ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.