ಕಾಸರಗೋಡು: ಎರ್ನಾಕುಳಂನ ವ್ಯಾಪಾರಿಯಿಂದ ಬ್ಲ್ಯಾಕ್‍ಮೇಲ್ ಮೂಲಕ ಲಕ್ಷಾಂತರ ರೂ. ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ದಂಪತಿ ಸೇರಿದಂತೆ ನಾಲ್ಕು ಮಂದಿಯನ್ನು ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗಬಂಧನ ವಿಧಿಸಲಾಗಿದೆ.
ವಿದ್ಯಾನಗರ ಸನಿಹದ ನಾಯಮರ್‍ಮೂಲೆ ನಿವಾಸಿ ಸಾಜಿದಾ, ಅರಮಂಗಾನ ನಿವಾಸಿ ಎನ್.ಎ ಉಮ್ಮರ್, ಈತನ ಪತ್ನಿ ಫಾತಿಮಾ ಹಾಗೂ ಪರಿಯಾರಂ ನಿವಾಸಿ ಇಕ್ಬಾಲ್ ಬಂಧಿತರು. ಕೊಚ್ಚಿ ಕಡವತ್ರ ನಿವಾಸಿ, ವ್ಯಾಪಾರಿ ಸಿ.ಎ ಸತ್ತಾರ್(58)ಎಂಬವರ ದೂರಿನ ಮೇರೆಗೆ ಈ ಬಂಧನ ನಡೆದಿದೆ. ಎರಡನೇ ಸಂಬಂಧದ ವಿವಾಹಕ್ಕಾಗಿ ಹುಡುಕಾಟದ ಮಧ್ಯೆ ಸಾಜಿದಾ ಮಿಸ್ಡ್ ಕಾಲ್ ಮೂಲಕ ವ್ಯಾಪಾರಿಯನ್ನು ಬಲೆಗೆ ಬೀಳಿಸಿದ್ದಳು. ನಂತರ ಎನ್.ಎ ಉಮ್ಮರ್ ಹಾಗೂ ಈತನ ಪತ್ನಿ ಫಾತಿಮಾಳನ್ನು ತಂದೆ, ತಾಯಿ ಎಂದು ಪರಿಚಯಿಸಿ ವ್ಯಾಪಾರಿಯನ್ನು ಕಾಞಂಗಾಡಿಗೆ ಕರೆಸಿ, ವಿವಾಹವಾಗಿದ್ದಾಳೆ. ಮದುವೆ ಕಳೆದು ವಧುವರರು ಕಾಞಂಗಾಡು ಸನಿಹದ ಆಲಾಮಿಪಳ್ಳಿಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಮಧ್ಯೆ ಸಾಜಿದಾ ವ್ಯಾಪಾರಿಗೆ ಅರಿಯದೆ, ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿ, ಇದನ್ನು ಸಂಬಂಧಿಕರಿಗೆ ಕಳುಹಿಸಿಕೊಡುವುದಾಗಿ ಬ್ಲ್ಯಾಕ್‍ಮೇಲ್ ನಡೆಸಲಾರಂಭಿಸಿದ್ದಾಳೆ. ಈ ಮೂಲಕ ವ್ಯಾಪಾರಿ ಬಳಿಯಿದ್ದ 3.7ಲಕ್ಷ ರೂ. ನಗದು, ಏಳುವರೆ ಪವನು ಚಿನ್ನ, ಮೊಬೈಲನ್ನು ವಸೂಲಿಮಾಡಿದ್ದಳು. ಇದಾದ ಕೆಲವು ದಿವಸಗಳ ನಂತರ ಮತ್ತೆ ಹಣಕ್ಕಾಗಿ ಬೇಡಿಕೆಯಿರಿಸದಾಗ ವ್ಯಾಪಾರಿ ದೂರು ನೀಡಿದ್ದರು. ಈ ರೀತಿ ಬ್ಲ್ಯಾಕ್‍ಮೇಲ್ ನಡೆಸಿ ಹಣ ಕಬಳಿಸಿರುವ ಬಗ್ಗೆ ಸಾಜಿದಾ ವಿರುದ್ಧ ವಿವಿಧ ಠಾಣೆಗಳಲ್ಲಿ ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳಿರುವ ಬಗ್ಗೆ ಸಂಶಯಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.