ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66 ರ ಅಭಿವೃದ್ಧಿಯ ಭಾಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ತಲಪ್ಪಾಡಿಯಿಂದ ಚೆಂಗಳವರೆಗೆ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗುತ್ತಿದೆ. ಯುಎಲ್ ಸಿಸಿಎಸ್ ಕಾಸರಗೋಡು ಎಕ್ಸ್ ಪ್ರೆಸ್ ವೇ ಲಿಮಿಟೆಡ್ ಗೆ ಗುತ್ತಿಗೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ಆಡಳಿತ (ಪ್ರಾಜೆಕ್ಟ್ ಮ್ಯಾನೇಜ್ಮೆಂಟ್) ಘಟಕದ ಯೋಜನಾ ನಿರ್ದೇಶಕರು, ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಲು ಈಗಿರುವ ರಸ್ತೆಯ ಎರಡೂ ಬದಿಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮನೆಗಳು ಮತ್ತು ಸುತ್ತುಗೋಡೆಗಳು ಸೇರಿದಂತೆ ಚರ ಮತ್ತು ಸ್ಥಿರಾಸ್ತಿಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ನಷ್ಟ ಪರಿಹಾರ ರೂಪವಾಗಿ ಕಟ್ಟಡದ ಮೂಲ ಮೌಲ್ಯಕ್ಕಿಂತ ಆರು ಶೇಕಡಾ ಕಡಿಮೆ ಪರಿಹಾರ ನಿಧಿ ಲಭಿಸಿದ ಭೂಮಾಲೀಕರು ಕಟ್ಟಡದ ಅವಶೇಷಗಳನ್ನು ಮೂರು ದಿನಗಳಲ್ಲಿ ಸ್ಥಳಾಂತರಿಸಬೇಕು ಇಲ್ಲವಾದರೆ ಭೂಮಾಲೀಕರಿಗೆ ಕಟ್ಟಡದ ಅವಶೇಷಗಳ ಮೇಲೆ ಯಾವುದೇ ಹಕ್ಕುಗಳಿರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಇನ್ನೂ ಭೂಮಿಯನ್ನುಸ್ವಾಧೀನಪಡಿಸಿಕೊಳ್ಳದ ಭೂಮಾಲೀಕರು ಭೂಮಿಯನ್ನು ಹಸ್ತಾಂತರಿಸಿದ ಮೂರು ದಿನಗಳಲ್ಲಿ ಕಟ್ಟಡದ ಭಾಗಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು. ಇಲ್ಲದಿದ್ದರೆ, ಭೂಮಾಲೀಕರು ಕಟ್ಟಡ ತ್ಯಾಜ್ಯದ ಹಕ್ಕುಗಳನ್ನು ಹೊಂದಿರುವುದಿಲ್ಲ ಎಂದು ಯೋಜನಾ ನಿರ್ದೇಶಕರು ಹೇಳಿರುವರು.