ನವದೆಹಲಿ: ಯಮುನಾ ನದಿಗೆ ಕಲುಷಿತ ನೀರು ಬಿಡುತ್ತಿರುವುದನ್ನು ತಡೆಯಲು ವಿಫಲರಾಗಿರುವ ದೆಹಲಿ ಮತ್ತು ಉತ್ತರ ಪ್ರದೇಶದ ಅಧಿಕಾರಿಗಳನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಅಧಿಕಾರಿಗಳು ಸಾರ್ವಜನಿಕ ಆರೋಗ್ಯ ಮತ್ತು ಪರಿಸರವನ್ನು ರಕ್ಷಿಸಬೇಕೆ ಹೊರತು ಕೇವಲ ಸ್ಥಾನ ಮತ್ತು ಸವಲತ್ತುಗಳನ್ನು ಅನುಭವಿಸುತ್ತಾ ಕೂರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಅನೇಕ ಕೈಗಾರಿಕೆಗಳು ಸಂಸ್ಕರಿಸದ ಕಲುಷಿತ ನೀರನ್ನು ನಿರ್ಭಯದಿಂದ ಹೊರಹಾಕುತ್ತಿವೆ. ದೇಶದ ಕಾನೂನು ಅಸ್ತಿತ್ವದಲ್ಲಿಲ್ಲವೇ? ಅಪರಾಧ ಮಾಡಲು ದೇಶ ಮುಕ್ತವಾಗಿದೆಯೇ ಎಂದು ಅಧಿಕಾರಿಗಳನ್ನು ನ್ಯಾಯಮಂಡಳಿ ಪ್ರಶ್ನಿಸಿದೆ.
ಎನ್‌ಜಿಟಿ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠವು, ಶಾಸನಬದ್ಧ ನಿಯಂತ್ರಕರ ವರದಿಗಳಲ್ಲಿ ನಿರ್ದಿಷ್ಟ ಅವಲೋಕನವನ್ನು ನೀಡಲಾಗಿದ್ದರೂ ಇದುವರೆಗೂ ಒಬ್ಬ ವ್ಯಕ್ತಿಯನ್ನೂ ಕೂಡ ವಿಚಾರಣೆಗೆ ಒಳಪಡಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ನೋಯ್ಡಾ ಪ್ರಾಧಿಕಾರ, ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು, ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ (ಎಸ್‌ಇಐಎಎ), ಯುಪಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಯುಪಿ ಪೊಲೀಸರ ಶಾಸನಬದ್ಧ ಅಧಿಕಾರಗಳಿಗೆ ಯಾವುದೇ ಕೊರತೆ ಇಲ್ಲ, ಆದರೂ ಆಶ್ಚರ್ಯಕರವಾಗಿ ನೊಯ್ಡಾ ಅಸಹಾಯಕವಾಗಿದೆ. ಏಕೆಂದರೆ ನಮಗೆ ಶಕ್ತಿ ಇಲ್ಲ ಎಂದು ನೊಯ್ಡಾ ಪರ ವಕೀಲರು ತಿಳಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
'ಹೀಗಾಗಿ, ಈ ರೀತಿ ಹೇಳಿದ ಅಧಿಕಾರಿಗಳ ಸಾಂವಿಧಾನಿಕ ಬಾಧ್ಯತೆಯ ಸ್ಪಷ್ಟ ವೈಫಲ್ಯವಿದೆ, ಅಂತಹ ಸಂಸ್ಥೆಗಳ ಮುಖ್ಯಸ್ಥರು ಶಿಕ್ಷಾರ್ಹ ಅಪರಾಧಕ್ಕೆ ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತಾರೆ" ಎಂದು ನ್ಯಾಯಪೀಠ ಹೇಳಿದೆ.
'ಈ ರೀತಿ ಹೇಳಿದ ಅಧಿಕಾರಿಗಳು ತಾವು ಸಾರ್ವಜನಿಕ ಆರೋಗ್ಯ ಮತ್ತು ಪರಿಸರವನ್ನು ರಕ್ಷಿಸುವ ಅತ್ಯಂತ ನಂಬಿಕೆಯ ಸ್ಥಾನವನ್ನು ಆಕ್ರಮಿಸಿಕೊಂಡಿದ್ದೇವೆ. ಮುಗ್ಧ ನಾಗರಿಕರ ದುಃಖದ ವೆಚ್ಚದಲ್ಲಿ ಕೇವಲ ಸ್ಥಾನ ಮತ್ತು ಸವಲತ್ತುಗಳನ್ನು ಅನುಭವಿಸುವುದಷ್ಟೇ ನಮ್ಮ ಕೆಲಸವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.' ಎಂದು ಪೀಠ ಹೇಳಿದೆ.
ಮಾನವೀಯತೆಯ ವಿರುದ್ಧದ ಗಂಭೀರ ಅಪರಾಧಗಳ ಮೂಕ ಪ್ರೇಕ್ಷಕರಾಗಿ ಅಧಿಕಾರಿಗಳು ಮುಂದುವರಿದಿದ್ದಾರೆ ಎಂದು ಎನ್‌ಜಿಟಿ ಹೇಳಿದೆ.
ನೊಂದವರು ಅಸಹಾಯಕರಾಗಿದ್ದು, ಅವರ ಸಂವಿಧಾನಾತ್ಮಕವಾದ ಪರಿಸರವನ್ನು ಸ್ವಚ್ಛಗೊಳಿಸುವ ಹಕ್ಕು ಕಾಗದದ ಮೇಲೆ ಉಳಿದಿದೆ. ರಾಜ್ಯಗಳ ಉನ್ನತ ಅಧಿಕಾರಿಗಳು ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳುವ ಮೂಲಕ ಪರಿಸ್ಥಿತಿಯನ್ನು ಸುಧಾರಿಸುವಂತೆ ಎನ್‌ಜಿಟಿ ಆದೇಶ ಮಾಡಿದೆ.
ಇಲ್ಲಿಯವರೆಗೆ, ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಮತ್ತು ಕಾನೂನು ಉಲ್ಲಂಘನೆ ಮಾಡಿದವರನ್ನು ಬಂಧಿಸುವ, ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸುವ, ಶಾಸನಬದ್ಧ ಒಪ್ಪಿಗೆಗಳನ್ನು ಹಿಂಪಡೆಯುವ, ಮರುಸ್ಥಾಪನೆ ಕ್ರಮಗಳಿಗೆ ಪರಿಹಾರವನ್ನು ಪಡೆಯುವ ಯಾವುದೇ ಅರ್ಥಪೂರ್ಣ ಕ್ರಮವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಹದಿನೈದು ದಿನಗಳಲ್ಲಿ ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯದಲ್ಲಿ ಆಂತರಿಕ ಸಭೆ ನಡೆಸಿ ಪರಿಸ್ಥಿತಿಯ ಅವಲೋಕನ ಮತ್ತು ಪರಿಹಾರ ಕ್ರಮಗಳನ್ನು ಯೋಜಿಸಬೇಕು ಎಂದು ದೆಹಲಿ ಮತ್ತು ಉತ್ತರ ಪ್ರದೇಶದ ಅಧಿಕಾರಿಗಳಿಗೆ ಎನ್‌ಜಿಟಿ ಕಟ್ಟಪ್ಪಣೆ ಮಾಡಿದೆ.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಅಧಿಕಾರಿಗಳ ಹೊಣೆಗಾರಿಕೆ, ಚರಂಡಿಯಲ್ಲಿ ಮಾಲಿನ್ಯ ವಿಸರ್ಜನೆಯನ್ನು ತಡೆಯುವುದು, ಉಲ್ಲಂಘಿಸುವವರ ವಿರುದ್ಧ ಬಲವಂತದ ಕ್ರಮಗಳು, ಹೌಸಿಂಗ್ ಸೊಸೈಟಿಗಳು ಅಥವಾ ಇತರರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಮೂಲಕ ಪ್ರಾಸಿಕ್ಯೂಷನ್ ಆರಂಭಿಸುವಿಕೆ, ಮೌಲ್ಯಮಾಪನ ಮತ್ತು ಹಿಂದಿನ ಉಲ್ಲಂಘನೆಗಳಿಗೆ ಪರಿಹಾರ ಪಡೆಯುವಿಕೆ, ಕಾನೂನು ಉಲ್ಲಂಘಿಸಿದ ಸಂಬಂಧಿತ ನಿರ್ಮಾಣ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವ ಮೂಲಕ ಕಾನೂನಿನ ಪ್ರಕ್ರಿಯೆಯನ್ನು ಅನುಸರಿಸಬೇಕೆಂದು ಎನ್‌ಜಿಟಿ ಆದೇಶಿಸಿದೆ.