ಕಾಸರಗೋಡು: ನಗರದ ಎಂ.ಜಿ ರಸ್ತೆಯಲ್ಲಿ ನೀರಿನ ಪೈಪ್ ಅಳವಡಿಕೆ ನೆಪದಲ್ಲಿ ಅಗೆದುಹಾಕಲಾದ ರಸ್ತೆ, ವಾಹನ ಸವಾರರ ಪಾಲಿಗೆ ಕಂಟಕವಾಗುತ್ತಿದೆ. ನಗರದ ಚಂದ್ರಗಿರಿ ಜಂಕ್ಷನ್‍ನಿಂದ ಹೊಸ ಬಸ್ ನಿಲ್ದಾಣ ವರೆಗೆ ರಸ್ತೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಅಗೆದುಹಾಕಲಾದ ರಸ್ತೆಯಲ್ಲಿ ಜಲ್ಲಿಕಲ್ಲುಗಳು ಎದ್ದು, ಬೈಕ್ ಸವಾರರ ಸಂಚಾರಕ್ಕೆ ಸವಾಲಾಗಿ ಪರಿಣಮಿಸುತ್ತಿದೆ.
ಪೈಪ್ ಅಳವಡಿಕೆ ಕಾರ್ಯ ಪೂರ್ತಿಗೊಂಡಿದ್ದರೂ, ಇದಕ್ಕೆ ಡಾಂಬರೀಕರಣ ನಡೆಸದಿರುವುದರಿಂದ ರಸ್ತೆ ಮತ್ತಷ್ಟು ಶೀಥಿಲಗೊಳ್ಳಲು ಕಾರಣವಾಗುತ್ತಿದೆ. ಘನ ವಾಹನಗಳು ಸಂಚರಿಸುವ ಮಧ್ಯೆ ಟಯರಿಗೆ ಸಿಲುಕಿಕೊಳ್ಳುವ ಜಲ್ಲಿಕಲ್ಲು ಎಸೆಯಲ್ಪಡುತ್ತಿದ್ದು, ಬೈಕ್ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯ ತಂದೊಡ್ಡುತ್ತಿದೆ. ಜತೆಗೆ ರಸ್ತೆ ಅಂಚಿಗೆ ನಿಲ್ಲಿಸುತ್ತಿರುವ ವಾಹನಗಳಿಗೂ ಬಡಿದು ಹಾನಿಯುಂಟಾಗುತ್ತಿರುವುದಾಗಿ ಸ್ಥಳೀಯ ವ್ಯಾಪಾರಿಗಳು ದೂರಿದ್ದಾರೆ.