ಹೈದರಾಬಾದ್: ಭಾರತದ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರನ್ನು ದೇಶದ ಆರ್ಥಿಕ ಸುಧಾರಣೆಗಳ ಪಿತಾಮಹ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಶುಕ್ರವಾರ ಬಣ್ಣಿಸಿದರು. ಕಾಂಗ್ರೆಸ್‌ನ ಈ ಮುತ್ಸದ್ದಿಯ ಅಧಿಕಾರಾವಧಿಯಲ್ಲಿ ದೇಶದ ಸುಧಾರಣೆ ಆರಂಭವಾಯಿತು ಎಂದು ಹೇಳಿದರು.
'ರಿಜಿಸ್ಟ್ರೇಷನ್ ಆಫ್ ಟ್ರಸ್ಟ್ ಡೀಡ್ಸ್ ಆಫ್ ಇಂಟರ್‌ನ್ಯಾಶನಲ್ ಆರ್ಬಿಟ್ರೇಶನ್ ಆಯಂಡ್ ಮೀಡಿಯೇಶನ್ ಸೆಂಟರ್' ಉದ್ಘಾಟಿಸಿ ಮಾತನಾಡಿದ ಅವರು, "ಸಂಧಾನ ಮಾತುಕತೆ ಮತ್ತು ಮಧ್ಯಸ್ಥಿಕೆ ಮೂಲಕ ವ್ಯಾಜ್ಯವನ್ನು ಬಗೆಹರಿಸಿಕೊಳ್ಳುವುದು ಭಾರತೀಯ ಸಂಸ್ಕೃತಿಯ ಭಾಗ" ಎಂದು ಬಣ್ಣಿಸಿದರು.
"ದೇಶದ ಆರ್ಥಿಕ ಸುಧಾರಣೆಗಳ ಪಿತಾಮಹ ತೆಲಂಗಾಣದ ಪುತ್ರ ಪಿ.ವಿ.ನರಸಿಂಹರಾವ್ ಎನ್ನುವುದು ನಿಮಗೆಲ್ಲರಿಗೂ ತಿಳಿದಿದೆ. ಅವರ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಆರ್ಥಿಕ ಸುಧಾರಣೆ ಆರಂಭಿಸಿತು" ಎಂದು ಸಿಜೆಐ ವಿವರಿಸಿರು.
ವ್ಯಾಜ್ಯ ನಿರ್ಣಯ ಮತ್ತು ಮಧ್ಯಸ್ಥಿಕೆ ನಾವು ಹೊಸದಾಗಿ ಸಂಶೋಧಿಸಿದ್ದೇನೂ ಅಲ್ಲ. ಭಾರತದ ಸಂಸ್ಕೃತಿಯಲ್ಲಿ ನಾವು ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಮತ್ತು ಸಂಧಾನ ಮಾತುಕತೆ ಮತ್ತು ಸಾಮರಸ್ಯದ ಮೂಲಕ ಬಗೆಹರಿಸಿಕೊಳ್ಳುತ್ತಿದ್ದೆವು. ಪ್ರತಿದಿನವೂ ನಾವು ನಮ್ಮ ಮಕ್ಕಳು, ಸಹೋದರರು ಮತ್ತು ಸ್ನೇಹಿತರ ಜತೆ ಸಂಧಾನ ಮಾಡಿಕೊಳ್ಳುತ್ತಲೇ ಇರುತ್ತೇವೆ ಎಂದು ಅಭಿಪ್ರಾಯಪಟ್ಟರು.