ಮುಳ್ಳೇರಿಯ: ಸ್ಟೇಜ್ ಆರ್ಟಿಸ್ಟ್ ಮತ್ತು ವರ್ಕರ್ಸ್ ಅಸೋಸಿಯೇಶನ್ ಕೇರಳ(ಸವಾಕ್)ನ ಕಾರಡ್ಕ ಬ್ಲಾಕ್ ಸಮಾವೇಶ ಕಾರಡ್ಕ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆಯಿತು.
ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ ರಾಜ್ಯ ಸರ್ಕಾರವು ಕಲಾವಿದರಿಗೆ ಕೋವಿಡ್ ಸಂಕಷ್ಟದ ಸಂಕೀರ್ಣ ಸ್ಥಿತಿಯಲ್ಲೂ ನೆರವು ನೀಡುವ ಮೂಲಕ ಕಲಾವಿದರಿಗೆ ಒಂದಷ್ಟು ಬಲತುಂಬಲು ಪ್ರಯತ್ನಿಸಿದೆ. ಇಂದು ಕಲಾವಿದರು ಪ್ರಬಲ ಹೋರಾಟದ ಮೂಲಕ ಪಡೆದ ಹಕ್ಕುಗಳಿಂದ ಸಂತುಷ್ಠರಾಗಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸವಾಕ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುದರ್ಶನ ವರ್ಣಂ ಮಾತನಾಡಿ, ಕೋವಿಡ್ ಅವಧಿಯಲ್ಲಿ ಕಷ್ಟದಲ್ಲಿರುವ ಕಲಾವಿದರಿಗೆ ಸರ್ಕಾರ ನೀಡಿರುವ ನೆರವು ಶ್ಲಾಘನೀಯ. ಆದರೆ ಇನ್ನಷ್ಟು ಅಶಕ್ತ ಕಲಾವಿದರಿಗೆ ನೆರವು ದೊರಕಬೇಕಿದೆ. ಈ ನಿಟ್ಟಿನಲ್ಲಿ ಸವಾಕ್ ಸ್ಥಳೀಯ ಘಟಕಗಳು ಬಲಿಷ್ಠಗೊಳ್ಳಬೇಕು ಎಂದರು.
ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು, ಪ್ರಧಾನ ಕಾರ್ಯದರ್ಶಿ ಸನ್ನಿ ಅಗಸ್ಟಿನ್ ಮತ್ತು ಖಜಾಂಜಿ ಚಂದ್ರಹಾಸ ಕಯ್ಯಾರ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಸವಾಕ್ ಕಾರಡ್ಕ ಬ್ಲಾಕ್ ಘಟಕಾಧ್ಯಕ್ಷ ಮಧುಸೂದನ ಬಲ್ಲಾಳ್ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ 15 ಸದಸ್ಯರ ನೂತನ ಸಮಿತಿಯ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಸುಂದರ ಮವ್ವಾರು, ಕಾರ್ಯದರ್ಶಿಯಾಗಿ ಮಧುಸೂದನ ಬಲ್ಲಾಳ್ ಮತ್ತು ಖಜಾಜಿಯಾಗಿ ರಾಜೇಶ್ ಎನ್ ಅವರನ್ನು ಆಯ್ಕೆಮಾಡಲಾಯಿತು. ಅಪ್ಪಕುಂಞÂ ಮಣಿಯಾಣಿ, ಚನಿಯಪ್ಪ ನಾಯಕ್, ಎಂ.ಎಂ. ಗಂಗಾಧರನ್ ನೀಲೇಶ್ವರ ಶುಭ ಹಾರೈಸಿದರು.