ನವದೆಹಲಿ: ಕತಾರ್ನಲ್ಲಿರುವ ಭಾರತದ ರಾಯಭಾರಿ ಮಂಗಳವಾರ ತಾಲಿಬಾನ್‌ನ ಉನ್ನತ ನಾಯಕನೊಂದಿಗೆ ಮಾತುಕತೆ ನಡೆಸಿದ್ದಾರೆ, ತಾಲಿಬಾನ್ ಉಗ್ರಗಾಮಿ ಸಂಘಟನೆಯು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ನಡೆದ ಮೊದಲ ಔಪಚಾರಿಕ ಮಾತುಕತೆ ಇದಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯವು ಹೇಳಿದೆ.
ಭಾರತದ ರಾಯಭಾರಿ ದೀಪಕ್ ಮಿತ್ತಲ್ ಅವರು, ತಾಲಿಬಾನ್‌ನ ಕೋರಿಕೆಯ ಮೇರೆಗೆ ದೋಹಾದಲ್ಲಿರುವ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜಾಯ್ ಅವರನ್ನು ಭೇಟಿಯಾದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಈ ಮಾತುಕತೆ ನಡೆದಿದ್ದು, 'ಅಫ್ಗಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ ಮತ್ತು ಆದಷ್ಟು ಬೇಗ ವಾಪಸಾತಿಯ ಬಗ್ಗೆ ಚರ್ಚಿಸಲಾಗಿದೆ. ಜೊತೆಗೆ, ಅಲ್ಪಸಂಖ್ಯಾತರು ಸೇರಿದಂತೆ ಭಾರತಕ್ಕೆ ತೆರಳಲು ಇಚ್ಛಿಸುವವರ ಬಗ್ಗೆಯೂ ಚರ್ಚೆ ನಡೆದಿದೆ' ಎಂದು ಎಂಇಎ ಹೇಳಿದೆ.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ನಿಕಟ ಸಂಬಂಧ ಹೊಂದಿರುವ ಕಾರಣ ಭಾರತವು ತಾಲಿಬಾನ್ ಬಗ್ಗೆ ಬಹಳ ಹಿಂದಿನಿಂದಲೂ ಕಳವಳ ಹೊಂದಿದೆ.
ಭಾರತ ವಿರೋಧಿ ಉಗ್ರಗಾಮಿಗಳು ಅಫ್ಘಾನಿಸ್ತಾನದ ನೆಲವನ್ನು ಬಳಸಿ ದಾಳಿ ನಡೆಸಬಹುದು ಎಂಬ ಆತಂಕವನ್ನು ಮಿತ್ತಲ್ ವ್ಯಕ್ತಪಡಿಸಿದ್ದಾರೆ. ಅಫ್ಗಾನಿಸ್ತಾನದ ನೆಲದ ಮೂಲಕ ಭಾರತೀಯ ವಿರೋಧಿ ಚಟುವಟಿಕೆಗಳು ಮತ್ತು ಭಯೋತ್ಪಾದನೆಗೆ ಯಾವುದೇ ರೀತಿಯಲ್ಲಿ ಬಳಸಲು ಅವಕಾಶ ನೀಡಬಾರದು ಎಂದು ಮಿತ್ತಲ್ ತಿಳಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.