ಉಪ್ಪಳ: ಕಲೆ, ಸಂಸ್ಕøತಿಯ ಪೋಷಣೆ, ಭಾಷೆಯ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗಿರುವುದಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ತಿಳಿಸಿದ್ದಾರೆ.
ಅವರು ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘ ಹಾಗೂ ಗಡಿನಾಡ ಯಕ್ಷಗಾನ ಅಕಾಡಮಿ ಕಾಸರಗೋಡು ವತಿಯಿಂದ ಆಯೋಜಿಸಲಾದ ಮನೆ ಮನೆ ಯಕ್ಷಗಾನ ಅಭಿಯಾನವನ್ನು ಪೈವಳಿಕೆ ಜೋಡುಕಲ್ಲಿನ ಜೆ.ಕೆ.ವಿ ಸಭಾಂಗಣದಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡಿನಲ್ಲಿ ಯಕ್ಷಗಾನದಿಂದಾಗಿ ಕನ್ನಡ ಭಾಷೆ ಮುನ್ನೆಲೆಗೆ ಬಂದಿದೆ. ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ ಅವರ ತವರಿನಲ್ಲಿ ಯಕ್ಷಗಾನ ಕಲೆಯ ಬಗ್ಗೆ ಮತ್ತಷ್ಟು ಕೆಲಸ ನಡೆದುಬರಬೇಕಾಗಿದೆ ಎಂದು ತಿಳಿಸಿದರು.
ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾವಿದ, ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರ ಅಧ್ಯಕ್ಷ ಶಂಕರ ರೈ ಮಾಸ್ಟರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಯಕ್ಷಗಾನ ನಾಡಿನ ಜನತೆಗೆ ಬದುಕಿನ ಜತೆಗೆ ಮಾತು, ಸಂಸ್ಕøತಿ ಕಲಿಸಿಕೊಟ್ಟ ಕಲೆಯಾಗಿದೆ. ಕರೊನಾ ಸಂಕಷ್ಟದ ಕಾಲಘಟ್ಟದಲ್ಲಿ ವಿವಿಧ ಸಂಘಟನೆಗಳು ಒಟ್ಟುಗೂಡಿ ನಡೆಸುತ್ತಿರುವ ಅಭಿಯಾನ ಕಲಾವಿದರಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ. ಕಲಾವಿದರ ಹೋರಾಟದ ಬದುಕಿಗೆ ಇಂತಹ ಅಭಿಯಾನ ವರದಾನವಾಗಲಿ ಎಂದು ತಿಳಿಸಿದರು. ಪೈವಳಿಕೆ ಗ್ರಾಂ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ಝೆಡ್.ಎ ಕಯ್ಯಾರ್, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಅಶ್ವತ್ ಪೂಜಾರಿ ಲಾಲ್‍ಭಾಗ್, ಕರ್ನಾಟಕ ಯಕ್ಷಗಾನ ಅಕಾಡಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಮಾಜಿ ಸದಸ್ಯ ಪ್ರಸಾದ್ ರೈ, ಯಕ್ಷಗಾನ ಕಲಾಪೋಷಕ ವಸಂತ ಆಳ್ವ ಉಪಸ್ಥಿತರಿದ್ದರು. ಅಭಿಯಾನದ ಸಂಚಾಲಕ ಅಖಿಲೇಶ್ ನಗುಮುಗಂ ಸ್ವಾಗತಿಸಿದರು. ಯಕ್ಷಗಾನ ನಾಟ್ಯಗುರು ಜಯರಾಮ ಪಾಟಾಳಿ ಪಡುಮಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ. ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನ ಕಾರ್ಯಕ್ರಮ ಸೇವಾಕರ್ತರಾದ ಕ್ಲಬ್ ಪದಾಧಿಕಾರಿಗಳಿಗೆ ಶಂಕರ ರೈ ಮಾಸ್ಟರ್ ಪ್ರಮಾಣಪತ್ರ ವಿತರಿಸಿದರು.