ಕೋವಲಂ: ಪ್ರೀತಿಗೆ ಯಾವುದೇ ಜಾತಿ, ಧರ್ಮ, ಭಾಷೆ, ಗಡಿ ಹಾಗೂ ವಯಸ್ಸಿನ ಮಿತಿ ಇಲ್ಲ. ಪವಿತ್ರ ಪ್ರೀತಿ ಎಲ್ಲವನ್ನು ಮೀರಿದ್ದು ಎನ್ನುವುದಕ್ಕೆ ಕೇರಳದ ಈ ಒಂದು ಲವ್ಸ್ಟೋರಿ ಉತ್ತಮ ಉದಾಹರಣೆ ಆಗಿದೆ. ಆತ ಕೇರಳದ ಒಂದು ಪುಟ್ಟ ಹಳ್ಳಿಯ ಯುವಕ. ಆಕೆ ಇಂಗ್ಲಿಷ್ ಲೇಡಿ. ಇಬ್ಬರಿಗೂ ಎಲ್ಲಿಂದೆಲ್ಲಿ ಸಂಬಂಧ ಅಂದುಕೊಂಡರು ಇಬ್ಬರನ್ನು ಪ್ರೀತಿ ಎಂಬ ಸೇತುವೆ ಬೆಸಿದಿದೆ.
ಯುವಕನ ಹೆಸರು ಕನ್ನಪ್ಪನ್ ಹಾಗೂ ಇಂಗ್ಲಿಷ್ ಲೇಡಿಯ ಹೆಸರು ಮಿರಾಂಡಾ. ಇಬ್ಬರ ಲವ್ ಸ್ಟೋರಿ ಯಾವ ಸಿನಿಮಾ ಸ್ಟೋರಿಗೂ ಕಡಿಮೆ ಇಲ್ಲ. ಇಬ್ಬರ ಲವ್ ಸ್ಟೋರಿ ಶುಭಾಂತ್ಯಗೊಂಡು ಇದೀಗ ತಮ್ಮ ಮಗುವಿನ ಸಮ್ಮುಖದಲ್ಲಿ ಅವದುಥುರಾ ದೇವಸ್ಥಾನದಲ್ಲಿ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರನ್ನು ಒಂದು ಮಾಡಿದ್ದು, ಒಂದು ಪುಟ್ಟ ನಾಯಿ ಎಂಬುದೇ ವಿಶೇಷ. ಆ ನಾಯಿಯ ಹೆಸರು ಜೈಕಾ. ಮದುವೆ ಬಳಿಕ ಇಬ್ಬರು ಜೈಕಾ ಜತೆ ಸುಂದರ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ.
ಇಬ್ಬರ ಲವ್ ಸ್ಟೋರಿಯ ಬಗ್ಗೆ ಹೇಳುವುದಾದರೆ, ಜೈಕಾ ಒಮ್ಮೆ ಅನಿರೀಕ್ಷಿತವಾಗಿ ಅರಣ್ ಚಂದ್ರನ್ (ಕಣ್ಣಪ್ಪನ್) ಮನೆಗೆ ಓಡಿ ಹೋಗುತ್ತದೆ. ಅದನ್ನು ಹುಡುಕಿಕೊಂಡು ಮಿರಾಂಡ ಅವರ ಮನೆಗೆ ಬರುತ್ತಾರೆ. ಬಳಿಕ ಇಬ್ಬರಿಗೂ ಪರಸ್ಪರ ಪರಿಚಯವಾಗುತ್ತದೆ. ಇದೇ ಪರಿಚಯ ಸ್ನೇಹಕ್ಕೆ ತಿರುಗುತ್ತದೆ. ಬಳಿಕ ತುಂಬಾ ಸಲುಗೆ ಬೆಳೆದು ಒಬ್ಬೊರಿಗೊಬ್ಬರು ಪ್ರೀತಿಸಲು ಶುರು ಮಾಡುತ್ತಾರೆ.
ಅಂದಹಾಗೆ ಅರುಣ್ ಚಂದ್ರನ್ ಕೊವಲಂಗೆ ಭೇಟಿ ನೀಡುವ ವಿದೇಶಿಗರಿಗೆ ಸಮುದ್ರ ತೀರದಲ್ಲಿ ಸರ್ಫಿಂಗ್ ಬಗ್ಗೆ ಹೇಳಿಕೊಡುತ್ತಾರೆ. ಮಿರಾಂಡ ಇಂಗ್ಲೆಂಡ್ ಮೂಲದ ಉದ್ಯಮಿ ಆಗಿದ್ದು, ಲಾಕ್ಡೌನ್ಗೂ ಮುಂಚೆ ಕೇರಳದ ಕೊವಲಂ ಪ್ರವಾಸಕ್ಕೆಂದು ಬಂದ ಮಿರಾಂಡ ಲಾಕ್ಡೌನ್ನಿಂದಾಗಿ ಪ್ರಯಾಣದ ಮೇಲೆ ಏರಿದ ನಿರ್ಬಂಧದಿಂದಾಗಿ ಇಲ್ಲಿಯೇ ಲಾಕ್ ಆಗುತ್ತಾರೆ.
ಇದರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಮಿರಾಂಡಗೆ ಮತ್ತೆ ಇಂಗ್ಲೆಂಡ್ ಹೋಗುವ ಅವಕಾಶ ದೊರೆತರೂ ಹಿಂದಿರುಗದೇ ಅರುಣ್ ಜತೆಯಲ್ಲೇ ಉಳಿದುಕೊಳ್ಳುತ್ತಾರೆ. ಇಬ್ಬರ ಪ್ರೀತಿ ಅರುಣ್ ಮನೆಗೆ ತಿಳಿದಿರುತ್ತದೆ. ಹೀಗಿರುವಾಗ ಮಿರಾಂಡ ಗರ್ಭಿಣಿ ಎಂಬ ವಿಚಾರ ತಿಳಿದು ಅರುಣ್ ಕುಟುಂಬಕ್ಕೆ ಸಂತಸವಾಗುತ್ತದೆ. ಎರಡು ತಿಂಗಳ ಹಿಂದಷ್ಟೇ ಮಿರಾಂಡ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಸಾಯಿ ಎಂದು ಹೆಸರಿಟ್ಟಿದ್ದಾರೆ. ಮಿರಾಂಡ ಆಸೆಯಂತೆಯೇ ಅಧಿಕೃತವಾಗಿ ಸಾಯಿ ಅರ್ಥೂರ್ ಲಿಟಲ್ಗುಡ್ ಎಂದು ಹೆಸರಿಸಲಾಗಿದೆ.
ಮಗುವಿಗೆ ಜನ್ಮ ನೀಡಿದ ಬಳಿಕ ಕುಟುಂಬದ ಆಸೆ ನೆರವೇರಿಸಲು ಇಬ್ಬರು ಮದುವೆ ಆಗಲು ನಿರ್ಧರಿಸಿದರು. ಮಗು ಕೂಡ ಮದುವೆ ಮಂಟಪದಲ್ಲಿತ್ತು. ಅದ್ಧೂರಿಯಾಗಿ ಮದುವೆ ಕಾರ್ಯ ಮುಗಿದಿದ್ದು, ಆದಷ್ಟು ಬೇಗ ದಂಪತಿ ಇಂಗ್ಲೆಂಡ್ಗೆ ತೆರಳುವ ಸಾಧ್ಯತೆ ಇದೆ.