ಲಖನೌ: ವಿರೋಧಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, 'ಸಂಕುಚಿತ ಮನಸ್ಥಿತಿಯನ್ನು ಹೊಂದಿರುವವರನ್ನು ಅಧಿಕಾರಕ್ಕೆ ತರಬಾರದು' ಎಂದು ಜನತೆಗೆ ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶಕ್ಕೆ ಎರಡು ದಿನದ ಭೇಟಿಗೆ ಆಗಮಿಸಿರುವ ಅವರು, ಸಂಕುಚಿತ ಮನಸ್ಥಿತಿಯವರು ಉತ್ತರಪ್ರದೇಶವನ್ನು ಹೇಗೆ ಮುನ್ನಡೆಸುವುದು ಸಾಧ್ಯ ಎಂದು ಪ್ರಶ್ನಿಸಿದರು. ರಾಜ್ಯ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ.
ಜಿಲ್ಲಾ ಮತ್ತು ಬ್ಲಾಕ್ ಪಂಚಾಯಿತಿಗಳಿಗೆ ಆಯ್ಕೆಯಾದವರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಸ್ಥಿತಿ ಮತ್ತು ಲಸಿಕೆ ಅಭಿಯಾನವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಹೇಳಿದರು.
2020ರ ಏಪ್ರಿಲ್‌ನಲ್ಲಿ ಕಾರ್ಯಪಡೆಯನ್ನು ರಚಿಸಿದ್ದ ನರೇಂದ್ರ ಮೋದಿ ಅವರು, ನಂತರದ 9 ತಿಂಗಳ ಅವಧಿಯಲ್ಲಿ ದೇಶದಲ್ಲಿ ಎರಡು ಲಸಿಕೆ ಲಭ್ಯವಾಗುವಂತೆ ಕ್ರಮವಹಿಸಿದ್ದರು ಎಂದರು.
'ನಾವು ಲಸಿಕೆ ಪಡೆಯುವುದಿಲ್ಲ ಎಂಬುದು ಬೇರೆ ವಿಷಯ. ಆದರೆ, ಇದು ಬಿಜೆಪಿ ಲಸಿಕೆ ಎಂದು ಪ್ರಚಾರ ಮಾಡಿದರು. ಇಂಥ ಸಂಕುಚಿತ ಮನಸ್ಥಿತಿಯವರು ಹೇಗೆ ರಾಜ್ಯವನ್ನು ಮುನ್ನಡೆಸಲು ಸಾಧ್ಯ. ಈ ಬಗ್ಗೆ ಚಿಂತಿಸಬೇಕು' ಎಂದು ಹೇಳಿದರು.
ಲಸಿಕೆ ಬಿಡುಗಡೆ ಆಗುತ್ತಿದ್ದಂತೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು, ಇದು ಬಿಜೆಪಿ ಲಸಿಕೆ. ನಾನು ಪಡೆಯುವುದಿಲ್ಲ ಎಂದರು. ಆದರೆ, ಇದೇ ಲಸಿಕೆಯನ್ನು ಹಲವು ದೇಶಗಳಿಗೂ ಪೂರೈಸಲಾಗಿತ್ತು ಎಂದು ನಡ್ಡಾ ಹೇಳಿದರು.