ಅಹಮದಾಬಾದ್: ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಭಾರತೀಯ ವಾಯುಪಡೆಯು ತನ್ನ ಒಬ್ಬ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದೆ. ಇದು ಸೇವಾ ಷರತ್ತು ಎಂದು ಕೇಂದ್ರ ಸರ್ಕಾರ ಗುಜರಾತ್ ಹೈಕೋರ್ಟ್‌ಗೆ ತಿಳಿಸಿದೆ.
ಗುಜರಾತ್‌ನ ಜಾಮ್‌ನಗರದಲ್ಲಿರುವ ಐಎಎಫ್ ಕಾರ್ಪೋರಲ್ ಯೋಗೇಂದ್ರ ಕುಮಾರ್ ಅವರ ಅರ್ಜಿಯ ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ದೇವಾಂಗ್ ವ್ಯಾಸ್ ಅವರು ಹೈಕೋರ್ಟ್‌ಗೆ ಈ ಮಾಹಿತಿ ನೀಡಿದ್ದಾರೆ.
ಭಾರತದಾದ್ಯಂತ ಒಂಬತ್ತು ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದಾರೆ ಮತ್ತು ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ಸಲ್ಲಿಸಿದ ಒಬ್ಬರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ವ್ಯಾಸ್ ಅವರು ನ್ಯಾಯಮೂರ್ತಿಗಳಾದ ಎಜೆ ದೇಸಾಯಿ ಮತ್ತು ಎಪಿ ಠಾಕರ್ ಅವರ ವಿಭಾಗೀಯ ಪೀಠಕ್ಕೆ ತಿಳಿಸಿದ್ದಾರೆ.
ಆದಾಗ್ಯೂ, ಯಾರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅವರ ಹೆಸರು ಅಥವಾ ಇತರ ಯಾವುದೇ ವಿವರಗಳನ್ನು ಅವರು ನೀಡಿಲ್ಲ.
"ಭಾರತದಾದ್ಯಂತ, ಕೇವಲ ಒಂಬತ್ತು ಸಿಬ್ಬಂದಿ ಮಾತ್ರ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಅವರೆಲ್ಲರಿಗೂ ಶೋಕಾಸ್ ನೋಟಿಸ್ ನೀಡಲಾಗಿದೆ. ಒಬ್ಬರು ಪ್ರತಿಕ್ರಿಯಿಸಲಿಲ್ಲ, ಆದ್ದರಿಂದ ಪ್ರತಿಕ್ರಿಯೆಯ ಕೊರತೆಯ ದೃಷ್ಟಿಯಿಂದ, ಅವರ ಸೇವೆಯನ್ನು ಈಗಾಗಲೇ ಕೊನೆಗೊಳಿಸಲಾಗಿದೆ" ಎಂದು ವ್ಯಾಸ್ ನ್ಯಾಯಾಲಯಕ್ಕೆ ತಿಳಿಸಿದರು.
ಸಾಮಾನ್ಯವಾಗಿ ಲಸಿಕೆಯ ಬಗ್ಗೆ ಹೇಳುವುದಾದರೆ, ಇದು ಐಚ್ಛಿಕವಾಗಿದೆ, ಆದರೆ ಈಗ ವಾಯುಪಡೆಗೆ ಸಂಬಂಧಿಸಿದಂತೆ ಅದನ್ನು ಸೇವಾ ಷರತ್ತನ್ನಾಗಿ ಮಾಡಲಾಗಿದೆ. ಇದು ಸೇವೆಗೆ ಸೇರುವ ಮುನ್ನ ತೆಗೆದುಕೊಂಡ ಪ್ರಮಾಣವಚನದ ಭಾಗವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ ನಂತರ ನೀಡಲಾಗಿದ್ದ ನೋಟಿಸ್ ಪ್ರಶ್ನಿಸಿ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ಐಎಎಫ್‌ಗೆ ಸೂಚಿಸಿದೆ.