ನವದೆಹಲಿ :ಶಾಲೆ ಮರು ಆರಂಭದ ಬಗ್ಗೆ ತುರ್ತು ಪರಿಶೀಲನೆ ನಡೆಸುವಂತೆ ಹಾಗೂ ಭೌತಿಕ ತರಗತಿಗಳನ್ನು ಆರಂಭಿಸುವಂತೆ ವೈದ್ಯರು, ಶಿಕ್ಷಣ ತಜ್ಞರು ಹಾಗೂ ಇತರ ವೃತ್ತಿಪರರನ್ನು ಒಳಗೊಂಡ 56 ಸದಸ್ಯರ ಗುಂಪು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳನ್ನು ಬಹಿರಂಗ ಪತ್ರದ ಮೂಲಕ ಆಗ್ರಹಿಸಿದೆ.
ಪ್ರಧಾನ ಮಂತ್ರಿ ಕಚೇರಿ, ಕೇಂದ್ರ ಆರೋಗ್ಯ ಸಚಿವ ಮನುಸುಖ್ ಮಾಂಡವಿಯ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರನ್ನೂ ಉಲ್ಲೇಖಿಸಿರುವ ಪತ್ರದಲ್ಲಿ ಸಹಿದಾರರು, ಶಾಲೆ ಆರಂಭಿಸಲು ಮಕ್ಕಳಿಗೆ ಲಸಿಕೆ ಹಾಕುವುದು ಕಡ್ಡಾಯ ಮಾಡಬಾರದು ಎಂದು ಹೇಳಲಾಗಿದೆ.
ವಿದ್ಯಾರ್ಥಿಗಳು ಲಸಿಕೆ ತೆಗೆದುಕೊಂಡಿಲ್ಲ, ಶಾಲೆಗಳು ಸೂಪರ್ ಸ್ಪೆಡರ್ನಂತೆ ಕಾಣುತ್ತಿರುವುದು, ಕೋವಿಡ್ ಮೂರನೆ ಅಲೆಯ ಆತಂಕ, ಶಾಲೆಗಳು ಆರಂಭವಾದ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಸೇರಿದಂತೆ ಹಲವು ಆತಂಕಗಳ ಕಾರಣದಿಂದ ಹಲವು ಸರಕಾರಗಳು ಇನ್ನೂ ಕೂಡ ಶಾಲೆ ಆರಂಭಿಸಿಲ್ಲ. ಶಾಲೆ ಆರಂಭಿಸಲು ಬೆಂಬಲಿಸುವ ಜಾಗತಿಕ ಪುರಾವೆಗಳು ಇವೆ. ಅಲ್ಲದೆ, ಶಾಲೆ ಹಾಗೂ ಭೌತಿಕ ತರಗತಿಗಳನ್ನು ಆರಂಭಿಸುವ ಬಗ್ಗೆ ಸರಕಾರಗಳು ತುರ್ತಾಗಿ ಪರಿಶೀಲಿಸಬೇಕು ಎಂದರು ಪತ್ರದಲ್ಲಿ ಹೇಳಲಾಗಿದೆ.
ಶಾಲೆಯನ್ನು ಇಷ್ಟು ದೀರ್ಘ ಕಾಲ (ಒಂದೂವರೆ ವರ್ಷ) ಮುಚ್ಚಿರುವುದು ಜಗತ್ತಿನ ಕೇವಲ ನಾಲ್ಕೈದು ದೇಶಗಳಲ್ಲಿ ಭಾರತ ಒಂದು ಎಂದು ಪತ್ರ ಹೇಳಿದೆ. ''ಮಕ್ಕಳನ್ನು ತುರ್ತಾಗಿ ಶಾಲೆಗೆ ಕರೆ ತರುವ ಅಗತ್ಯತೆ ಇದೆ. ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್)ನ ಶಿಫಾರಸಿನಂತೆ ಸಣ್ಣ ಮಕ್ಕಳು ಕನಿಷ್ಠ ಅಪಾಯದಲ್ಲಿರುವುದರಿಂದ, ಪ್ರಾಥಮಿಕ ಶಾಲೆಯನ್ನು ಮೊದಲು ಆರಂಭಿಸಲು ಹಾಗೂ ಅನಂತರ ಉನ್ನತ ತರಗತಿಗಳನ್ನು ಆರಂಭಿಸಲು ಅನುಮತಿ ನೀಡುವಂತೆ ನಾವು ಆಗ್ರಹಿಸುತ್ತೇವೆ. ನಮ್ಮ ಮಕ್ಕಳಿಗಾಗಿ ರಾಜಕೀಯ ಪಕ್ಷದ ನಾಯಕರು ಒಗ್ಗಟ್ಟಾಗುವುದನ್ನು ನಾವು ಎದುರು ನೋಡುತ್ತಿದ್ದೇವೆ'' ಎಂದು ಪತ್ರ ಹೇಳಿದೆ.
ವಿದ್ಯಾರ್ಥಿಗಳಿಗೆ, ಮುಖ್ಯವಾಗಿ ಬಾಲಕಿಯರಿಗೆ ಶಿಕ್ಷಣದ ಕೊರತೆ ಮುಂದಿನ ಪೀಳಿಗೆಯ ಆರೋಗ್ಯ ಹಾಗೂ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಚೆನ್ನಾಗಿ ತಿಳಿದ ವಿಚಾರ. ಇದಕ್ಕೆ ನಾವು ಅತ್ಯಧಿಕ ಬೆಲೆ ತೆರಬೇಕಾದೀತು. ಆದುದರಿಂದ ಸರಕಾರಗಳು ಹಾಗೂ ಕಾರ್ಯಪಡೆಗಳು ಇವುಗಳು ಸಮತೋಲನ ಕಾಯ್ದುಕೊಳ್ಳಬೇಕು. ಇದು ಶಾಲೆ ತೆರೆಯಲು ಅನುಕೂಲ ಮಾಡಿಕೊಡಲಿದೆ ಎಂದು ಪತ್ರ ಹೇಳಿದೆ.