ನವದೆಹಲಿ : ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಆಟೋ ಉದ್ಯಮ ಚುರುಕಿನ ತಯಾರಿ ನಡೆಸಿದೆ. ಅದಾಗಲೇ ಮಹೀಂದ್ರ ಎಕ್ಸ್ಯುವಿ 700ನ ಲಾಂಚ್ ಆಗಸ್ಟ್ 15 ಕ್ಕೆ ನಿಗದಿಯಾಗಿದೆ. ಇದೀಗ ದ್ವಿಚಕ್ರವಾಹನ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಅದೇ ದಿನ ಭಾರತದಲ್ಲಿ ಲಾಂಚ್ ಆಗಲಿದೆ ಎಂದು ಕಂಪೆನಿ ಮುಖ್ಯಸ್ಥ ಭವಿಶ್ಅಗರ್ವಾಲ್ ತಿಳಿಸಿದ್ದಾರೆ.
ಆಗಸ್ಟ್ 15 ರಂದು ಅಧಿಕೃತ ಉದ್ಘಾಟನಾ ಕಾರ್ಯಕ್ರಮ ಆಯೋಜಿಸುತ್ತಿದ್ದು, ಸ್ಕೂಟರ್ನ ನಿರ್ದಿಷ್ಟ ವಿವರಗಳನ್ನು ಮತ್ತು ಲಭ್ಯತೆಯ ದಿನಾಂಕಗಳನ್ನು ಮುಂದೆ ತಿಳಿಸಲಾಗುವುದು ಎಂದು ಅಗರ್ವಾಲ್ ಹೇಳಿದ್ದಾರೆ.
ಪೆಟ್ರೋಲ್ ಬೆಲೆ ಏರಿಕೆಯ ಸಂದರ್ಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಹಲವರಿಗೆ ಉತ್ತಮ ಆಯ್ಕೆಯಾಗಿ ಕಾಣುತ್ತಿದೆ. ಹೀಗಿರುವಾಗ ಕೇವಲ 499 ರೂ. ಮುಂಗಡ ಹಣದೊಂದಿಗೆ ಬುಕ್ಕಿಂಗ್ ಆರಂಭಿಸಿರುವ ಓಲಾ ಕಂಪೆನಿಯ ಸ್ಕೂಟರ್ ಬಗ್ಗೆ ಲಕ್ಷಾಂತರ ಜನ ಆಸಕ್ತಿ ತೋರಿಸುತ್ತಿದ್ದಾರೆ.