ನವದೆಹಲಿ: ಇಟಲಿಯ ನಾವಿಕರಿಂದ ಇಬ್ಬರು ಮೀನುಗಾರರು ಮೃತಪಟ್ಟಿದ್ದ ಪ್ರಕರಣ ಸಂಬಂಧ ನಿಗದಿಪಡಿಸಿದ್ದ 2 ಕೋಟಿ ಮೊತ್ತವನ್ನು ಸದ್ಯ ದೋಣಿಯ ಮಾಲೀಕರಿಗೆ ಹಂಚಿಕೆ ಮಾಡಬಾರದು' ಎಂದು ಸುಪ್ರೀಂ ಕೋರ್ಟ್ ಗುರುವಾರ ಕೇರಳ ಹೈಕೋರ್ಟ್‌ಗೆ ನಿರ್ದೇಶಿಸಿದೆ.
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ವಿ.ರಾಮಸುಬ್ರಹ್ಮಣಿಯನ್ ಅವರಿದ್ದ ಪೀಠವು ಅವಘಡ ನಡೆದಾಗ ದೋಣಿಯಲ್ಲಿದ್ದು ಬದುಕುಳಿದಿದ್ದ 10 ಮೀನುಗಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಈ ನಿರ್ದೇಶನ ನೀಡಿತು. ದೋಣಿಯ ಮಾಲೀಕನಿಗೆ ನಿಗದಿಪಡಿಸಿದ್ದ 2 ಕೋಟಿಯಲ್ಲಿ ಪರಿಹಾರ ಪಡೆಯಲು ನಾವೂ ಅರ್ಹರು ಎಂದು ಅರ್ಜಿದಾರರು ವಾದಿಸಿದ್ದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಮೀನುಗಾರರ ಮನವಿಯನ್ನು, ಪರಿಹಾರದ ಮೊತ್ತ ವಿತರಣೆ ಹೊಣೆ ವಹಿಸಿರುವ ಕೇರಳ ಹೈಕೋರ್ಟ್‌ಗೆ ಕಳುಹಿಸಬೇಕು ಎಂದರು. ಪೀಠವು ಇದಕ್ಕೆ, ಪರಿಹಾರ ವಿತರಣೆ ಕುರಿತ ಯಾವುದೇ ಆದೇಶದಿಂದ ದೋಣಿಯ ಮಾಲೀಕನ ಪಾಲು ಕುಗ್ಗಬಹುದಾದ ಕಾರಣ, ಅವರಿಗೂ ನೋಟಿಸ್ ಜಾರಿ ಮಾಡಬೇಕು, ಸದ್ಯ ಪರಿಹಾರ ವಿತರಿಸಬಾರದು ಎಂದಿತು.