ಕಾಸರಗೋಡು: 6 ತಿಂಗಳ ಅವಧಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಎಲ್ಲ ಸೇವೆಗಳೂ ಆನ್ ಲೈನ್ ಮೂಲಕ ಲಭ್ಯವಾಗಲಿವೆ ಎಂದು ಸ್ಥಳೀಯಾಡಳಿತ, ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ತಿಳಿಸಿದರು.
ಕಾಸರಗೋಡು ಜಿಲ್ಲಾ ಪಂಚಾಯತ್ ನ ಜನಪರ ಯೋಜನೆಯ ಬೆಳ್ಳಿಹಬ್ಬ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಿ ಅವರು ಮಾತನಾಡಿದರು.
ಸದ್ರಿ 213 ಸೇವೆಗಳು ಆನ್ ಲೈನ್ ಮೂಲಕ ಜಾರಿಗೊಳ್ಳುತ್ತಿವೆ. ವಿವಿಧ ಡೈರೆಕ್ಟರೇಟ್ ಗಳ ವ್ಯಾಪ್ತಿಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳು ಒಂದೇ ಛಾವಣಿಯಡಿ ಬರುವ ವೇಳೆ ಸೇವೆಗಳ ರೂಪುರೇಷೆ ಬದಲಾಗಲಿದೆ. ಆನ್ ಲೈನ್ ಮೂಲಕ ಯೋಜನೆಗಳನ್ನು ಬೇಕಾಬಿಟ್ಟಿ ಸಲ್ಲಿಸಿ ಅಂಗೀಕಾರ ಪಡೆಯಲು ಸಾಧ್ಯವಿಲ್ಲ. ಸಾರ್ವಜನಿಕರಿಗೆ ಸೇವೆ ಪಡೆಯಲು ಕಚೇರಿಗಳಿಗೆ ನೇರವಾಗಿ ಬರಬೇಕಾದ ಅಗತ್ಯವೂ ಬರುವುದಿಲ್ಲ. ಇದೇ ವೇಳೆ ಉದ್ದಿಮೆ ಆರಂಭಿಸುವ ವೇಳೆ ಯಾವ ರೀತಿ ಅರ್ಜಿ ಸಲ್ಲಿಕೆ ನಡೆಯಬೇಕು, ಯಾವ ರೀತಿ ಮಂಜೂರಾತಿ ನೀಡಬೇಕು ಎಂಬ ಚಿಂತನೆ ಸಿಬ್ಬಂದಿಗೂ ಇರಬೇಕು. ತಾಂತ್ರಿಕ ಸಮಸ್ಯೆಗಳನ್ನು ತಿಳಿಸಿ ಉದ್ದಿಮೆಗಳ ಆರಂಭಕ್ಕೆ ತಡೆಯುಂಟು ಮಾಡಕೂಡದು ಎಂದು ಸಚಿವ ನುಡಿದರು.
ರಾಜ್ಯದಲ್ಲಿ ನೂತನ ತಲೆಮಾರಿನ ಕುಟುಂಬಶ್ರೀ ಗಳು ಜಾರಿಗೊಳ್ಳಲಿವೆ ಎಂದು ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ನುಡಿದರು. ಮಹಿಳಾ ಪ್ರಬಲೀಕರಣ, ಬಡತನ ನಿವಾರಣೆ ಗುರಿಯಾಗಿಸಿ ಕೇರಳದ ಕುಟುಂಬಶ್ರೀಗಳಲ್ಲಿ ಬದಲಾವಣೆ ತರಲಾಗುವುದು. 18ರಿಂದ 40 ವರ್ಷದ ನಡುವಿನ ವಯೋಮಾನದ ಶಿಕ್ಷಿತ ಯುವಜನತೆಗೆ ಪ್ರತ್ಯೇಕ ನೋಂದಣಿ ಸೌಲಭ್ಯ ಇರುವುದು. ವಾಡೊರ್ಂದರಲ್ಲಿ ಒಂದು ಉದ್ದಿಮೆ ಎಂಬ ರೀತಿಯನ್ನು ಗುರಿಯಾಗಿಸಿ ನೂತನ ಶಿಕ್ಷಿತ ತಲೆಮಾರಿಗೆ ನೌಕರಿ ಸಾಧ್ಯತೆ ಒದಗಿಸಲಾಗುವುದು ಎಂದು ಸಚಿವ ವಿವರಿಸಿದರು.
ಸ್ಥಳೀಯಾಡಳಿತ ಸಂಸ್ಥೆಗಳನ್ನು ನೂತನ ತಲೆಮಾರಿಗೆ ತಕ್ಕಂತೆ ಪರಿವರ್ತಿಸುವ ಕ್ರಿಯಾತ್ಮಕ ಯತ್ನಗಳು ನಡೆಯಬೇಕಿದೆ. ಒಂದು ಸಾವಿರ ಮಂದಿಯಲ್ಲಿ ಕನಿಷ್ಠ 5 ಮಂದಿಗೆ ನೌಕರಿ ಸಾಧ್ಯತೆ ಗುರಿಯಾಗಿಸಿ ಈ ಬದಲಾವಣೆ ನಡೆಯಬೇಕು. ಅತ್ಯಾಧುನಿಕ ಕೇರಳ ನಿರ್ಮಾಣಕ್ಕೆ ಈ ಬೆಳವಣಿಗೆ ಪೂರಕವಾಗಬೇಕು. ಶಿಕ್ಷಣ, ಆರೋಗ್ಯ ಸಹಿತ ಜನಜೀವನಕ್ಕೆ ಸಂಬಂಧಿಸಿದ ಎಲ್ಲ ವಲಯಗಳಲ್ಲೂ ಪರಿಣಾಮಕಾರಿಯಾಗಿ ಚಟುವಟಿಕೆ ನಡೆಸಿದ್ದ ಜನಪರ ಯೋಜನೆಯ 25ನೇ ವರ್ಷಾಚರಣೆ ನಡೆಯುತ್ತಿದೆ. ಜನಪರ ಯೋಜನೆಯ ದ್ವಿತೀಯ ಹಂತದಲ್ಲಿ ಶಿಕ್ಷಿತ ಯುವಜನತೆಯ ನೌಕರಿ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಸಶಕ್ತವಾಗುವಂತೆ ಬದಲಾವಣೆ ತರಲಾಗುವುದು ಎಂದವರು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜನಪರ ಯೋಜನೆಯ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಎಂ.ವಿ.ಬಾಲಕೃಷ್ಣನ್ ಮಾಸ್ಟರ್, ಸ್ಥಾಯೀ ಸಮಿತಿ ಸದಸ್ಯರಾಗಿದ್ದ ವಿ.ಪಿ.ಪಿ.ಮುಸ್ತಫಾ, ಎಂ.ವಿ.ಗೋವಿಂದನ್ ಮಾಸ್ಟರ್ ಅವರನ್ನು ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳನ್ನು ಅಭಿನಂದಿಸಲಾಯಿತು. ರಾಜ್ಯ ಜೈವಿಕ ವೈವಿಧ್ಯ ಮಂಡಳಿ ಪ್ರಶಸ್ತಿ ವಿಜೇತರಿಗೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಗೌರವಾರ್ಪಣೆ ನಡೆಸಿದರು.
ಶಾಸಕರಾದ ಎನ್.ಎ.ನೆಲ್ಲಿಕುನ್ನು, ಇ.ಚಂದ್ರಶೇಖರನ್, ನ್ಯಾಯವಾದಿ ಸಿ.ಎಚ್.ಕುಂಞಂಬು, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್, ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಗೀತಾ ಕೃಷ್ಣನ್, ಕೆ.ಶಕುಂತಲಾ, ನ್ಯಾಯವಾದಿ ಸರಿತಾ, ಎಸ್.ಎನ್.ಸಿನೋಜ್ ಚಾಕೋ, ಜಿಲ್ಲಾ ಯೋಜನೆ ಸಮಿತಿ ಸದಸ್ಯ ಸಿ.ರಾಮಚಂದ್ರನ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ್ವಆನವಾಝ್ ಪಾದೂರು ಸ್ವಾಗತಿಸಿದರು. ಕಾರ್ಯದರ್ಶಿ ಪಿ.ನಂದಕುಮಾರ್ ವಂದಿಸಿದರು.