ಊಟಿ: ಭಾರತದ ವಿರುದ್ಧ ಎರಡು ಯುದ್ಧಗಳಲ್ಲಿ ಸೋಲು ಅನುಭವಿಸಿರುವ ಪಾಕಿಸ್ತಾನ ಇದೀಗ ಛಾಯಾ ಸಮರ ಆರಂಭಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.
ಊಟಿ ಸಮೀಪದ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್, ʼನಮ್ಮ ನೆರೆಹೊರೆಯಲ್ಲಿರುವ ರಾಷ್ಟ್ರಗಳಲ್ಲಿ ಒಂದು ದೇಶ (ಪಾಕಿಸ್ತಾನ), ಎರಡು ಯುದ್ಧಗಳಲ್ಲಿ ನಮ್ಮಿಂದ ಸೋಲು ಅನುಭವಿಸಿದ ಬಳಿಕ ಛಾಯಾ ಸಮರವನ್ನು ಆರಂಭಿಸಿದೆ. ಭಯೋತ್ಪಾದನೆಯು ಅದರ ರಾಜ್ಯ ನೀತಿಯ ಅವಿಭಾಜ್ಯ ಅಂಗವಾಗಿದೆ. ಅದು (ಪಾಕ್) ಉಗ್ರರಿಗೆ ಧನಸಹಾಯ, ಶಸ್ತ್ರಾಸ್ತ್ರ, ತರಬೇತಿ ಒದಗಿಸುವ ಮೂಲಕ ಭಾರತವನ್ನು ಗುರಿಯಾಗಿಸಿದೆʼ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಗಡಿ ಪ್ರದೇಶಗಳಲ್ಲಿನ ಸವಾಲಿನ ಹೊರತಾಗಿಯೂ, ದೇಶದ ಜನರು ಇಂದು ರಾಷ್ಟ್ರೀಯ ಭದ್ರತೆಯ ವಿಚಾರವಾಗಿ ವಿಶ್ವಾಸ ಹೊಂದಿದ್ದಾರೆ ಎಂದಿದ್ದಾರೆ.
ಮುಂದುವರಿದು, ಭಯೋತ್ಪಾದನೆಯನ್ನು ಕೊನೆಗಾಣಿಸಲು ಭಾರತ ತನ್ನ ನೆಲದಲ್ಲಿ ಮಾತ್ರವಲ್ಲದೇ, ಅಗತ್ಯವಿದ್ದಲ್ಲಿ ಅವರದೇ (ಪಾಕ್) ಪ್ರದೇಶಗಳಲ್ಲಿಯೂ ಕಾರ್ಯಾಚರಣೆ ನಡೆಸಲು ಹಿಂಜರಿಯುವುದಿಲ್ಲ ಎಂಬ ನಂಬಿಕೆ ಕ್ರಮೇಣ ಬಲಗೊಳ್ಳುತ್ತಿದೆ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.
ಜಾಗತೀಕರಣದಿಂದ ಭದ್ರತೆಗೆ ಸವಾಲು: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಾದನೆ
ಇಂದು ಕದನ ವಿರಾಮ (ಭಾರತ ಮತ್ತು ಪಾಕಿಸ್ತಾನ ನಡುವೆ) ಯಶಸ್ವಿಯಾಗಿದ್ದರೆ, ಅದಕ್ಕೆ ನಮ್ಮ ಶಕ್ತಿಯೇ ಕಾರಣ. 2016ರಲ್ಲಿ ಗಡಿಯಾಚೆ ನಡೆಸಿದ ದಾಳಿಯು ನಮ್ಮ ಮನಸ್ಥಿತಿಯನ್ನು ಬದಲಿಸಿತು. 2019ರಲ್ಲಿ ನಡೆದ ಬಾಲಾಕೋಟ್ ದಾಳಿ ಆ ಮನಸ್ಥಿತಿಯನ್ನು ಮತ್ತಷ್ಟು ಬಲಪಡಿಸಿತು ಎಂದೂ ಹೇಳಿಕೊಂಡಿದ್ದಾರೆ.