ಕಾಸರಗೋಡು: ನ್ಯಾಶನಲ್ ಹ್ಯಾಂಡ್‍ಲೂಮ್(ಕೈಮಗ್ಗ) ದಿನಾಚರಣೆ ಅಂಗವಾಗಿ ಜಿಲ್ಲೆಯ ಪ್ರತಿಷ್ಠಿತ ಕೈಮಗ್ಗ ಬಟ್ಟೆ ತಯಾರಿ ಸಂಸ್ಥೆ 'ಕಾಸರಗೋಡು ಸಾರೀಸ್' ನೆನಪಿಗಾಗಿ ಭಾರತೀಯ ಅಂಚೆ ಇಲಾಖೆ ಹೊರ ತಂದ ವಿಶೇಷ ಲಕೋಟೆಯ ಬಿಡುಗಡೆ ಸಮಾರಂಭ ಶನಿವಾರ ಕಾಸರಗೋಡು ವಿಭಾಗೀಯ ಅಂಚೆ ಸೂಪರಿಂಟೆಂಡೆಂಟ್ ಕಚೇರಿಯಲ್ಲಿ ಜರುಗಿತು.
ಶಾಸಕ ಎನ್.ಎ ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಂಚೆ ಇಲಾಖೆ ಉತ್ತರ ವಲಯ ಪೋಸ್ಟ್ ಮಾಸ್ಟರ್ ಜನರಲ್ ಟಿ. ನಿರ್ಮಲಾದೇವಿ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿದರು. ಕಾಸರಗೋಡು ವೀವರ್ಸ್ ಕೋಓಪರೇಟಿವ್ ಪ್ರೊಡಕ್ಷನ್ ಏಂಡ್ ಸೇಲ್ಸ್ ಸೊಸೈಟಿ ಅಧ್ಯಕ್ಷ ಮಾಧವ ಹೇರಳ ಅಂಚೆ ಲಕೋಟೆ ಸ್ವೀಕರಿಸಿದರು. ಜಿ.ಐ ಟ್ಯಾಗ್ ಹೊಂದಿದ ಕಾಸರಗೋಡು ಸೀರೆಗಳ ವಿಶೇಷ ಅಂಚೆ ಲಕೋಟೆ ದೇಶದ ನಾನಾ ಅಂಚೆ ಕಚೇರಿಗಳಲ್ಲಿ ಐದು ರೂ. ದರದಲ್ಲಿ ಲಭ್ಯವಾಗಲಿದೆ. ಕಾಸರಗೋಡು ವಿಭಾಗ ಅಂಚೆ ಅಧೀಕ್ಷಕಿ ವಿ.ಶಾರದಾ ಸ್ವಾಗತಿಸಿದರು. ಸಹಾಯಕ ಅಧೀಕ್ಷಕಿ ಪಿ.ಆರ್. ಶೀಲಾ ವಂದಿಸಿದರು.