ನವದೆಹಲಿ: ಈ ಹಿಂದೆ ತಾನೇ ರದ್ದುಗೊಳಿಸಿದ ಕೆಲವು ಉಪಬಂಧಗಳನ್ನು ಹೊಂದಿರುವ ಮಸೂದೆಯನ್ನು ಮತ್ತೆ ಮಂಡಿಸಲು ಕಾರಣ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಆಗಸ್ಟ್ 9ರಂದು ರಾಜ್ಯಸಭೆಯಲ್ಲಿ ನ್ಯಾಯಾಂಗ ಸುಧಾರಣೆ ಮಸೂದೆ 2021ನ್ನು ಕೇಂದ್ರ ಸರಕಾರ ಮಂಡಿಸಿದೆ. ಈ ಮಸೂದೆಗೆ ಆಗಸ್ಟ್ 3ರಂದು ಲೋಕಸಭೆಯಲ್ಲಿ ಅನುಮೋದನೆ ಲಭಿಸಿದೆ.
ಈ ಮಸೂದೆಯಲ್ಲಿರುವ 2 ಅಂಶಗಳು( ನ್ಯಾಯಮಂಡಳಿಗೆ ಸದಸ್ಯರನ್ನು ನೇಮಿಸುವ ಮಾನದಂಡದ ಕುರಿತ) ಈ ಹಿಂದೆ ಜುಲೈ 14ರಂದು ಪ್ರತ್ಯೇಕ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ರದ್ದುಗೊಳಿಸಿದ ಉಪಬಂಧಗಳೇ ಆಗಿವೆ. ನ್ಯಾಯಮಂಡಳಿಗಳು ತೆರಿಗೆ ಸಂಬಂಧಿತ ವ್ಯಾಜ್ಯಗಳನ್ನು ಪರಿಹರಿಸಲು ರಚಿಸಲಾಗುವ ಕಾನೂನುಬದ್ಧ ಸಂಸ್ಥೆಗಳಾಗಿವೆ. ದೇಶದಲ್ಲಿರುವ ವಿವಿಧ ನ್ಯಾಯಮಂಡಳಿಗಳಲ್ಲಿ ಖಾಲಿಇರುವ ಹುದ್ದೆಗಳ ನೇಮಕದ ಕುರಿತ ಅರ್ಜಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡ ಮುಖ್ಯ ನ್ಯಾಯಾಧೀಶ ಎನ್ ವಿ ರಮಣ ನೇತೃತ್ವದ ನ್ಯಾಯಪೀಠ, ಈ ಹಿಂದೆ ಅಮಾನ್ಯಗೊಳಿಸಿದ ಉಪಬಂಧಗಳನ್ನು ಹೊಂದಿರುವ ಮಸೂದೆಯನ್ನು ಮತ್ತೆ ಯಾಕೆ ಮಂಡಿಸಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರನ್ನು ಪ್ರಶ್ನಿಸಿತು.
ಅಲ್ಲದೆ, ಮಸೂದೆ ಜಾರಿಗೆ ಕಾರಣವಾದ ಅಂಶಗಳ ಕುರಿತ ಸರಕಾರದ ಹೇಳಿಕೆ ಇದ್ದರೆ ಅದನ್ನು ಓದಿ ಹೇಳಬಹುದು ಎಂದು ಮೆಹ್ತಾರಿಗೆ ತಿಳಿಸಿತು. ಇದಕ್ಕೆ ಉತ್ತರಿಸಿದ ಮೆಹ್ತಾ, ಮಸೂದೆಯು ಕಾಯ್ದೆಯ ರೂಪ ಪಡೆಯುವ ತನಕ ಹೇಳಿಕೆಯನ್ನು ಓದಿ ಹೇಳಲಾಗದು ಎಂದರು. ಅಲ್ಲದೆ, ವಿಷಯದ ಕುರಿತು ಹೇಳಿಕೆ ನೀಡುವ ಮೊದಲು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಜತೆ ಸಮಾಲೋಚಿಸಬೇಕಿರುವುದರಿಂದ ಕಾಲಾವಕಾಶದ ಅಗತ್ಯವಿದೆ ಎಂದರು. ನ್ಯಾಯಮಂಡಳಿಯ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇನ್ನು 10 ದಿನ ಕಾಲಾವಕಾಶ ನೀಡಿದರೆ ಇದು ಪೂರ್ಣಗೊಳ್ಳಲಿದೆ ಎಂದು ಮೆಹ್ತಾ ಕೋರಿದರು. ಇದಕ್ಕೆ ಉತ್ತರಿಸಿದ ನ್ಯಾಯಪೀಠ ' ಈ ಉತ್ತರವನ್ನು ಬಹಳ ಸಮಯದಿಂದ ಕೇಳುತ್ತಿದ್ದೇವೆ. ಈಗ 10 ದಿನದ ಕಾಲಾವಕಾಶ ನೀಡುತ್ತೇವೆ. ಆ ವೇಳೆಗೆ ನೇಮಕಾತಿ ನಡೆಯಲಿದೆ ಎಂಬ ವಿಶ್ವಾಸ ಹೊಂದಿದ್ದೇವೆ' ಎಂದಿತು.
ಈ ಮಸೂದೆಗೆ ರಾಜ್ಯಸಭೆಯಲ್ಲಿ ವಿಪಕ್ಷಗಳು ವಿರೋಧ ಸೂಚಿಸಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್, ಸರಕಾರಕ್ಕೆ ನ್ಯಾಯಾಂಗದ ಮೇಲೆ ಗೌರವವಿದೆ. ಅಸಂವಿಧಾನಿಕತೆಯ ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಹಿಂದೆ ಕೆಲವು ಉಪಬಂಧಗಳನ್ನು ರದ್ದುಗೊಳಿಸಿತ್ತು ಎಂದಿದ್ದರು. ಈ ಮಸೂದೆಯನ್ನು ಆಯ್ಕೆ ಸಮಿತಿಗೆ ಒಪ್ಪಿಸಬೇಕೆಂದು ವಿಪಕ್ಷಗಳು ಮಂಡಿಸಿದ್ದ ನಿಲುವಳಿ ಸೂಚನೆಗೆ 79-44 ಮತಗಳ ಅಂತರದಿಂದ ಸೋಲಾಗಿತ್ತು.