ನವದೆಹಲಿ: ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಯನ್ನು ಈಗ ಮತ್ತಷ್ಟು ಸರಳೀಕರಣಗೊಳಿಸಲಾಗಿದ್ದು, 5 ಕೋಟಿಗಿಂತಲೂ ಹೆಚ್ಚಿನ ವಹಿವಾಟು ಹೊಂದಿರುವ ತೆರಿಗೆ ಪಾವತಿದಾರರಿಗೆ ರಿಟರ್ನ್ಸ್ ಸಲ್ಲಿಕೆಯ ವಿಧಾನದಲ್ಲಿ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.
ಈ ವಿಭಾಗಕ್ಕೆ ಈ ವರೆಗೂ ಇದ್ದ ಕಡ್ಡಾಯ ಆಡಿಟ್ ಪ್ರಮಾಣಪತ್ರದ ಬದಲಾಗಿ ಸ್ವಯಂ ಪ್ರಮಾಣೀಕರಿಸಿ ರಿಟರ್ನ್ಸ್ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ ಎಂದು ಸಿಬಿಐಸಿ ಹೇಳಿದೆ.
2 ಕೋಟಿಗಿಂತ ಹೆಚ್ಚಿನ ವಹಿವಾಟು ನಡೆಸುವ ಉದ್ಯಮಗಳನ್ನು ಹೊರತುಪಡಿಸಿ ವಾರ್ಷಿಕ ಜಿಎಸ್ ಟಿ ಸಲ್ಲಿಕೆ- 2020-21 ನೇ ಸಾಲಿನ ಜಿಎಸ್ ಟಿಆರ್ 9/9A ಅಡಿಯಲ್ಲಿ ನೋಂದಾಯಿತ ಉದ್ಯಮಗಳಿಗೆ ಜಿಎಸ್ ಟಿ ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯವಾಗಿದ್ದು ಇದರ ಹೊರತಾಗಿ 5 ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸುವ ತೆರಿಗೆ ಪಾವತಿದಾರರಿಗೆ ಜಿಎಸ್ ಟಿಆರ್-9ಸಿ ಫಾರ್ಮ್ ನಲ್ಲಿ ರಿಕನ್ಸಿಲಿಯೇಷನ್ ಸ್ಟೇಟ್ಮೆಂಟ್ ಸಲ್ಲಿಸುವುದು ಕಡ್ಡಾಯವಾಗಿದೆ.
ರಿಕನ್ಸಿಲಿಯೇಷನ್ ಸ್ಟೇಟ್ಮೆಂಟ್ ಈ ವರೆಗೂ ಲೆಕ್ಕಪರಿಶೋಧಕರಿಂದ ಪ್ರಮಾಣಪತ್ರ ಪಡೆಯಬೇಕಿತ್ತು. ಆದರೆ ಈಗ ಅದಕ್ಕೆ ವಿನಾಯಿತಿ ನೀಡಲಾಗಿದ್ದು, ಸ್ವಯಂ ಪ್ರಮಾಣೀಕರಿಸಿ ಸಲ್ಲಿಸಲು ಅವಕಾಶ ನೀಡಲಾಗಿದೆ.