ನವದೆಹಲಿ: ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳ ನಡುವಿನ ಅಂತರವನ್ನು ಇಳಿಕೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಕುರಿತು ಸರ್ಕಾರವೇ ಸ್ಪಷ್ಟನೆ ನೀಡಿದ್ದು, ಕೋವಿಶೀಲ್ಡ್ (Covishield) , ಕೊವ್ಯಾಕ್ಸಿನ್ (Covaxin) , ಸ್ಪುಟ್ನಿಕ್-ವಿ (Sputnik-V ) ಲಸಿಕೆಯ ಡೋಸ್ಗಳ ನಡುವಿನ ಅಂತರ ತಗ್ಗಿಸುವ ಕುರಿತು ಯಾವುದೇ ಪ್ರಸ್ತಾವನೆಯಿಲ್ಲ ಎಂದು ಸ್ಪಷ್ಟಪಡಿಸಿದೆ. ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳ ನಡುವಿನ ಅಂತರ 84 ದಿನಗಳಾಗಿಯೇ ಮುಂದುವರೆಯಲಿದೆ ಎಂದು ಸರ್ಕಾರ ಘೋಷಿಸಿದೆ.
ಭಾರತದಲ್ಲಿ ಕೊವಿಡ್ ಲಸಿಕೆಯ ಡೋಸ್ಗಳ ಅಂತರದ ಬಗ್ಗೆ NTAGI ತೀರ್ಮಾನ ತೆಗೆದುಕೊಳ್ಳುತ್ತದೆ. ಕೋವಿಶೀಲ್ಡ್ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ನ ನಡುವೆ ಸದ್ಯಕ್ಕೆ 12ರಿಂದ 16 ವಾರಗಳ ಅಂತರವಿದೆ. ಈಗಾಗಲೇ 3 ಬಾರಿ ಕೋವಿಶೀಲ್ಡ್ ಲಸಿಕೆಯ ಡೋಸ್ನ ಅಂತರವನ್ನು ಹೆಚ್ಚಿಸಲಾಗಿದೆ. ಈ ಅಂತರವನ್ನು ತಗ್ಗಿಸುವ ಬಗ್ಗೆ ಈಗ ಚರ್ಚೆಗಳು ನಡೆದಿವೆ ಎನ್ನಲಾಗಿತ್ತು. ಆದರೆ, ಈ ಸುದ್ದಿಯನ್ನು ಸರ್ಕಾರ ತಳ್ಳಿ ಹಾಕಿದೆ.
ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳ ನಡುವೆ ಆರಂಭದಲ್ಲಿ 4ರಿಂದ 6 ವಾರಗಳ ಅಂತರವಿತ್ತು. ಬಳಿಕ ಅದನ್ನು 6ರಿಂದ 8 ವಾರಗಳಿಗೆ ಹೆಚ್ಚಿಸಲಾಯಿತು. ನಂತರ ಕಳೆದ ಮೇ ತಿಂಗಳಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳ ನಡುವಿನ ಅಂತರವನ್ನು 12ರಿಂದ 16 ವಾರಗಳಿಗೆ ವಿಸ್ತರಿಸಲಾಯಿತು. ಮುಂದಿನ ಮೂರು ತಿಂಗಳವರೆಗೆ ರಾಷ್ಟ್ರೀಯ ಕೋವಿಡ್ ಲಸಿಕೆ ಅಭಿಯಾನದ ಅಂಗವಾಗಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳನ್ನು ಸುಮಾರು 78 ಕೋಟಿ ಡೋಸ್‌ಗಳಷ್ಟು ಉತ್ಪಾದನೆ ಮಾಡಬೇಕೆಂದು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸೆಪ್ಟೆಂಬರ್ ನಲ್ಲಿ 26 ಕೋಟಿ ಡೋಸ್ ಮತ್ತು ಅಕ್ಟೋಬರ್ ನಲ್ಲಿ 28 ಕೋಟಿ ಡೋಸ್ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯನ್ನು ವಿತರಿಸಲಾಗುವುದು. ಸದ್ಯಕ್ಕೆ ಕೊವಿಡ್ ಲಸಿಕೆಗಳ ಡೋಸ್ಗಳ ನಡುವೆ ಈಗಿರುವ ಅಂತರವೇ ಮುಂದುವರೆಯಲಿದೆ.