ಬದಿಯಡ್ಕ: ಮಾನವನಿಗೆ ನಿಜವಾದ ಶಿಕ್ಷಣ ದೊರೆಯುವುದು ನಿಸರ್ಗದ ಒಡನಾಟದಿಂದಾಗಿದೆ. ಆದರೆ ಇಂದು ನಾವು ತಿನ್ನುವ ಅನ್ನ,ಕುಡಿಯುವ ನೀರು, ಸೇವಿಸುವ ಗಾಳಿ ಮಲಿನವಾಗುತ್ತಿದೆ. ಎಲ್ಲವೂ ವಿಷಮಯವಾಗುವ ಪರಿಸ್ಥಿತಿಯಲ್ಲಿ ಜಗತ್ತು ಇದೆ. ನಿಸರ್ಗ ಉಳಿದರೆ ಮನುಷ್ಯ ಉಳಿಯುತ್ತಾನೆ. ಮಾನವ ಅಭಿವೃದ್ಧಿಯ ಹೆಸರಿನಲ್ಲಿ ನಿರಂತರವಾಗಿ ಪ್ರಕೃತಿಯ ಮೇಲೆ ಸವಾರಿಮಾಡುತ್ತಿದ್ದಾನೆ. ಇದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಈ ದೃಷ್ಟಿಯಲ್ಲಿ ಕುವೆಂಪು ಮತ್ತು ತೇಜಸ್ವಿಯವರ ಪ್ರಕೃತಿ ಕುರಿತ ನಿಲುವು ಬದ್ಧತೆಯನ್ನು ತಿಳಿದುಕೊಳ್ಳುವುದು ಅವಶ್ಯಕವಾದುದಾಗಿದೆ ಎಂದು ಖ್ಯಾತ ಅಂಕಣಗಾರ, ಪ್ರಾಧ್ಯಾಪಕ ಡಾ ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯ, ಕಾಸರಗೋಡಿನ ಕನ್ನಡ ವಿಭಾಗವು ಆಯೋಜಿಸುತ್ತಿರುವ ಸರಣಿ ಉಪನ್ಯಾಸ 'ಸಾಹಿತ್ಯಯಾನ'ದ ಬುಧವಾರ ಸಂಜೆ ನಡೆದ ಹನ್ನೊಂದನೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು 'ಕುವೆಂಪು-ತೇಜಸ್ವಿ ಕೃತಿಗಳಲ್ಲಿ ಪ್ರಕೃತಿ' ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.
ರಸ ಋಷಿ ಕುವೆಂಪು ಕೃತಿಗಳಲ್ಲಿ ನಿಸರ್ಗದ ಒಳಗೆ ಅನಿಕೇತನ ಪ್ರಜ್ಞೆಯನ್ನು ಕಾಣುತ್ತೇವೆ. ನಿಸರ್ಗದ ಜೊತೆಗೆ ತನ್ಮಯವಾಗುವ , ಆ ತನ್ಮಯತೆಯೊಳಗಿಂದಲೇ ಆಧ್ಯಾತ್ಮಿಕ ಲೋಕವನ್ನು ಕಾಣುವ ದೃಷ್ಟಿ ಕುವೆಂಪು ಅವರದ್ದಾಗಿದೆ. ಕುವೆಂಪು ಅವರನ್ನು ಪ್ರವೇಶಿಸಲು ಹಲವು ದಾರಿಗಳಿವೆ. ನಿಸರ್ಗವನ್ನು ಪ್ರವೇಶಿಸಲು ಕುವೆಂಪು ಬಳಸಿದ್ದು ಆಧ್ಯಾತ್ಮದ ದಾರಿಯನ್ನು. ತನ್ನ ಕಾದಂಬರಿಗಳಲ್ಲಿ, ಕವನಗಳಲ್ಲಿ ನಿಸರ್ಗವನ್ನು ಕಟ್ಟಿಕೊಟ್ಟ ಬಗೆ ವಿಶಿಷ್ಟವಾದುದು. ನಿಸರ್ಗದ ಒಳಗೆ ದೇವರನ್ನು ಕಾಣುವ ಶ್ರದ್ಧೆ ಕುವೆಂಪುರವರದ್ದಾಗಿದೆ. ಕುವೆಂಪು ಕಾದಂಬರಿಗಳು ನಿಗೂಢ ಜಗತ್ತನ್ನು ಅನಾವರಣಗೊಳಿಸುತ್ತದೆ. ಕಾಡಿನ ನಿಗೂಢತೆಯಲ್ಲಿ ಅಧ್ಯಾತ್ಮದ ಅನುಸಂಧಾನವನ್ನು ಕುವೆಂಪು ನಡೆಸುತ್ತಾರೆ. ಆದರೆ ಪೂರ್ಣಚಂದ್ರ ತೇಜಸ್ವಿಯವರದ್ದು ನಿಸರ್ಗದ ಹಾದಿಯಾದರೂ ಅದು ಆಧ್ಯಾತ್ಮದ ನೆಲೆ ಅಲ್ಲ, ಅವರು ವಿಸ್ಮಯದ ಹಾದಿಯನ್ನು ದರ್ಶಿಸುತ್ತಾರೆ. ತೇಜಸ್ವಿ ಕುವೆಂಪುಗಿಂತ ಭಿನ್ನವಾಗಿ ಪ್ರಕೃತಿಯನ್ನು ಕಾಣುತ್ತಾರೆ. ತೇಜಸ್ವಿಯವರು ಪ್ರಕೃತಿಯ ಜೊತೆಗೆ ಒಬ್ಬ ಅಧ್ಯಯನಕಾರನ ಸಂಬಂಧವನ್ನು ಕಾಣುತ್ತೇವೆ ಎಂದರು.
ಕೇಂದ್ರೀಯ ವಿ.ವಿ.ಯ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ.ಮೋಹನ್ ಎ.ಕೆ., ಪ್ರಸ್ತಾವನೆಯ ಮಾತುಗಳನ್ನಾಡಿ, ಒಳ್ಳೆಯ ಸಾಹಿತ್ಯವು ಸಮಾಜದ ಬದಲಾವಣೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ. ನೆಲ ಜಲ ಮತ್ತು ಪ್ರಕೃತಿಯ ಕುರಿತ ಶಿಕ್ಷಣವು ವರ್ತಮಾನದಲ್ಲಿ ಅಗತ್ಯವಾದುದು. ಆರೋಗ್ಯಪೂರ್ಣ ಮನುಷ್ಯನನ್ನು ರೂಪಿಸುವಲ್ಲಿ ಸ್ವಸ್ಥ ಸಮಾಜವೂ ಮುಖ್ಯ. ಈ ದಿಶೆಯಲ್ಲಿ ನೆಲ ಜಲ ಮತ್ತು ಪರಿಸರದ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕನ್ನಡದ ಶ್ರೇಷ್ಠ ಸಾಹಿತಿಗಳು ನಿಸರ್ಗವನ್ನು ಕಂಡ ಬಗೆಯು ನಮಗೆ ಮಾದರಿಯಾಗಿದೆ ಎಂದರು.
ಪ್ರಥಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಜಯಶ್ರೀ ಸ್ವಾಗತಿಸಿ, ಗಿರೀಶ ಎಂ., ವಂದಿಸಿದರು. ಅಕ್ಷತ ಟಿ. ಜಿ., ಕಾರ್ಯಕ್ರಮ ನಿರೂಪಿಸಿದರು.