ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು 'ಕುಟುಂಬದ ಪೋಷಕ'ರಾಗಿದ್ದು, ಜಾತಿ ಆಧರಿತ ಗಣತಿ ಬೇಡಿಕೆಗೆ ಸಂಬಂಧಿಸಿದಂತೆ ಅವರು ಕೈಗೊಳ್ಳುವ ನಿರ್ಧಾರವನ್ನು ಎಲ್ಲರೂ 'ಒಪ್ಪುತ್ತಾರೆ' ಎಂದು ಬಿಜೆಪಿ ನಾಯಕ ಜನಕ್ ರಾಮ್ ಹೇಳಿದರು.
ಜಾತಿ ಆಧರಿತ ಗಣತಿಗೆ ಒತ್ತಾಯಿಸಲು ಪ್ರಧಾನಿ ಭೇಟಿಗೆ ತೆರಳಿದ್ದ 10 ಪಕ್ಷಗಳ ನಿಯೋಗದ ಭಾಗವಾಗಿದ್ದ ಅವರು, ಪ್ರಧಾನಿ ಭೇಟಿ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದರು.
ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಹೆಸರು ಉಲ್ಲೇಖಿಸದೇ ಅವರು, ಕೆಲ ಮುಖಂಡರು ಜಾತಿ, ಸಮುದಾಯದ ಹೆಸರಿನಲ್ಲಿ ರಾಜಕೀಯದಲ್ಲಿ ಮುಂದೆ ಬಂದಿದ್ದಾರೆ. ಬಳಿಕ ಕೇವಲ ತಮ್ಮ ಕುಟುಂಬದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಟೀಕಿಸಿದರು.
ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಅವರು ಜಾತಿ ಆಧರಿತ ಗಣತಿ ಕುರಿತ ಪ್ರಶ್ನೆಗೆ ನೇರ ಉತ್ತರ ನೀಡಲಿಲ್ಲ. ಪ್ರಧಾನಿಗೆ ಸಮುದಾಯದ ಸಮಗ್ರ ಅಭಿವೃದ್ಧಿ ಕುರಿತ ಅರಿವಿದ್ದು, ಸೂಕ್ತ ನಿರ್ಧಾರ ಕೈಗೊಳ್ಳುವರು ಎಂದು ಹೇಳಿದರು.
ವಿವಿಧ ಪಕ್ಷಗಳ ಪ್ರತಿನಿಧಿಗಳು ಈ ನಿಯೋಗದಲ್ಲಿ ಇದ್ದರು. ಜಾತಿ ಆಧರಿತ ಗಣತಿ ಕುರಿತು ಬಿಹಾರ ವಿಧಾನಸಭೆಯಲ್ಲಿ ಕೈಗೊಂಡಿದ್ದ ನಿರ್ಣಯವನ್ನು ಬೆಂಬಲಿಸಿದ್ದ ಬಿಜೆಪಿ, ಈ ವಿಷಯ ಕುರಿತು ಇನ್ನೂ ತನ್ನ ಖಚಿತ ನಿಲುವು ಪ್ರಕಟಿಸಿಲ್ಲ.