ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅವರನ್ನು ಅವಾಚ್ಯವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರವಾಸಿ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಪದ್ಮರಾಜನ್ ಐಂಗೋತ್ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ, ಮಾಜಿ ನಗರಸಭಾ ಸದಸ್ಯ ಅನಿಲ್ ವಾಯುನ್ನೋರಡಿ ಎಂಬವರ ವಿರುದ್ಧ ಕಾಸರಗೋಡು ರೈಲ್ವೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮಂಗಳೂರು-ತಿರುವನಂತಪುರ ಮಧ್ಯೆ ಸಂಚರಿಸುವ ಮಾವೇಲಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಕೋಯಿಕ್ಕೋಡಿಗೆ ಪ್ರಯಾಣಿಸುವ ಸಂದರ್ಭ ಕಾಞಂಗಾಡು-ನೀಲೇಶ್ವರ ಹಾದಿ ಮಧ್ಯೆ ಘಟನೆ ನಡೆದಿದೆ. ಸಂಸದ ರಆಜ್‍ಮೋಹನ್ ಉಣ್ಣಿತ್ತಾನ್ ಪ್ರಯಾಣಿಸುತ್ತಿದ್ದ ಏ.ಸಿ ಬೋಗಿಗೆ ಏರಿದ ಇಬ್ಬರೂ, ಬೆದರಿಕೆಯೊಡ್ಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸುವುದನ್ನು ಅರಿತ ಇಬ್ಬರೂ ನೀಲೇಶ್ವರದಲ್ಲಿ ರೈಲಿನಿಂದಿಳಿದು ತೆರಳಿರುವುದಾಗಿ ಸಂಸದರು ತಿಳಿಸಿದ್ದಾರೆ. ಕಾಸರಗೋಡು ರೈಲ್ವೆ ಎಸ್.ಐ ಟಿ.ಎನ್ ಮೋಹನನ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಪತ್ರಿಕಾ ವರದಿಯೊಂದಕ್ಕೆ ಸಂಬಂಧಿಸಿದ ವಿಷಯದಲ್ಲಿ ಸಂಸದರ ಜತೆ ವಾಗ್ವಾದ ನಡೆಸಿರುವುದಾಗಿ ಮಾಹಿತಿಯಿದೆ.