ನವದೆಹಲಿ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ನಡೆದ ಉಗ್ರರ ದಾಳಿಯನ್ನು ಭಾರತ ಬಲವಾಗಿ ಖಂಡಿಸಿದೆ. ಭಯೋತ್ಪಾದನೆ ವಿರುದ್ಧ ಜಗತ್ತು ಒಗ್ಗಟ್ಟಾಗಿ ನಿಲ್ಲುವ ಅಗತ್ಯವನ್ನು ಈ ದಾಳಿ ಬಲಪಡಿಸಿದೆ ಎಂದು ಪ್ರತಿಕ್ರಿಯೆ ನೀಡಿದೆ.
ಗುರುವಾರ ಸಂಜೆ ವೇಳೆಗೆ ನಡೆದ ಅವಳಿ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಸುಮಾರು 86 ಮಂದಿ ಪ್ರಾಣ ಕಳೆದುಕೊಂಡಿದ್ದರೆ, 120ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈ ದಾಳಿ ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ನೆಲೆ ನೀಡುವವರ ವಿರುದ್ಧ ಜಗತ್ತು ಒಗ್ಗಟ್ಟಾಗಿ ನಿಲ್ಲುವ ಅವಶ್ಯಕತೆಯನ್ನು ಮತ್ತೆ ಎತ್ತಿತೋರಿದೆ ಎಂದು ಭಾರತ ಹೇಳಿದೆ. ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪವನ್ನು ಸೂಚಿಸಿದೆ.
'ಭಾರತ ಕಾಬೂಲ್‌ನಲ್ಲಿ ನಡೆದ ಬಾಂಬ್ ಸ್ಫೋಟವನ್ನು ಬಲವಾಗಿ ಖಂಡಿಸುತ್ತದೆ. ಈ ಭಯೋತ್ಪಾದಕರ ದಾಳಿಯಲ್ಲಿ ಬಲಿಯಾದವರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸುತ್ತೇವೆ' ಎಂದು ಭಾರತದ ವಿದೇಶಾಂಗ ವ್ಯವಹಾರ ಸಚಿವಾಲಯ ಪ್ರಕಟಿಸಿದೆ.
ಪ್ರತೀಕಾರದ ಪ್ರತಿಜ್ಞೆ ಮಾಡಿದ ಅಮೆರಿಕ ಅಧ್ಯಕ್ಷ:
ಕಾಬೂಲ್‌ನ ಹಮೀದ್ ಕರ್ಜೈ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, "ಈ ಸಾವುಗಳಿಗೆ ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ' ಎಂದು ಸವಾಲು ಹಾಕಿದ್ದಾರೆ. 'ದಾಳಿ ನಡೆಸಿರುವ ಉಗ್ರರಿಗೆ ತಕ್ಕ ಉತ್ತರ ನೀಡೇ ನೀಡುತ್ತೇವೆ' ಎಂದು ಶ್ವೇತಭವನದಲ್ಲಿ ಪ್ರತಿಜ್ಞೆ ಮಾಡಿದ್ದಾರೆ.
ದಾಳಿ ಸಂಬಂಧ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜೋ ಬೈಡನ್, ಐಎಸ್‌ಐಎಲ್ ಸಂಘಟನೆ ಈ ಬಾಂಬ್ ದಾಳಿ ಹಿಂದಿದೆ ಎಂದು ದೃಢಪಡಿಸಿದ್ದಾರೆ. 'ಈ ದಾಳಿ ನಡೆಸಿದವರೊಂದಿಗೆ, ಅಮೆರಿಕಕ್ಕೆ ಹಾನಿ ಮಾಡಲು ಆಶಿಸಿದವರಿಗೆ ಈ ವಿಷಯ ತಿಳಿದಿರಲಿ; ನಾವು ಇದನ್ನು ಮರೆಯುವುದಿಲ್ಲ, ನಿಮ್ಮನ್ನು ಬೇಟೆಯಾಡಿ ಕೊಲ್ಲುತ್ತೇವೆ. ಇದಕ್ಕೆ ತಕ್ಕ ಬೆಲೆ ತೆರುವಂತೆ ಮಾಡುತ್ತೇವೆ' ಎಂದು ಭಾವನಾತ್ಮಕವಾಗಿದ್ದಾರೆ.
'ದಾಳಿ ನಡೆಸಿದವರು ಯಾರೆಂದು ನಮಗೆ ತಿಳಿದಿದೆ. ಅದು ಖಚಿತವಾದ ಬಳಿಕ ನಾವು ಅವರನ್ನು ಬೇಟೆಯಾಡದೇ ಬಿಡುವುದಿಲ್ಲ' ಎಂದು ಹೇಳಿದ್ದಾರೆ.
ನರಕಸದೃಶವಾದ ಕಾಬೂಲ್ ವಿಮಾನ ನಿಲ್ದಾಣ
ಗುರುವಾರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ದಾಳಿಯಲ್ಲಿ 13 ಅಮೆರಿಕ ಯೋಧರು ಹಾಗೂ 86ಕ್ಕೂ ಹೆಚ್ಚು ಅಫ್ಘಾನ್ ನಾಗರಿಕರನ್ನು ಕೊಲ್ಲಲಾಗಿದೆ. ಉಗ್ರರ ಕೌರ್ಯ ಮತ್ತು ಅಟ್ಟಹಾಸಕ್ಕೆ ಕಾಬೂಲ್‌ನ ಹಮೀದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಗುರುವಾರ ಸಾಕ್ಷಿಯಾಗಿತ್ತು. ವಿಮಾಣ ನಿಲ್ದಾಣ ಜನರ ಆಕ್ರಂದನದಿಂದ ತುಂಬಿಕೊಂಡಿತ್ತು.
ಅಬ್ದುಲ್ಲಾ ಫಾರೂಕಿ ಕೈವಾಡದ ಶಂಕೆ
ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಗುರುವಾರ ನಡೆದ ಸರಣಿ ಬಾಂಬ್ ಸ್ಫೋಟದ ಹಿಂದೆ ಐಎಸ್‌ಐಎಸ್‌ನ ಅಬ್ದುಲ್ಲಾ ಫಾರೂಖಿ ಕೈವಾಡವಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಫಾರೂಖಿ ಪಾಕಿಸ್ತಾನದವನಾಗಿದ್ದು, ಈ ಹಿಂದೆ ಲಷ್ಕರ್ ಎ ತೊಯ್ಬಾ, ತೆಹ್ರೀಕ್ ಇ ತಾಲಿಬಾನ್ ಉಗ್ರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ.
2019ರ ಏಪ್ರಿಲ್‌ನಿಂದ ಐಎಸ್‌ಐಎಸ್ ಉಗ್ರ ಸಂಘಟನೆಯ ಖೊರಾಸನ್ ಪ್ರಾಂತ್ಯದ ನಾಯಕನಾಗಿ ಗುರುತಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಅಘ್ಘಾನಿಸ್ತಾನದಲ್ಲಿ ಸ್ಫೋಟ ಮಾಡಿದ್ದು ನಾವೇ ಎಂದು ಇಸ್ಲಾಮಿಕ್ ಸ್ಟೇಟ್ ಐಎಸ್‍ಕೆಪಿ (ISKP) ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ.
ತಾಲಿಬಾನ್ ಸ್ಪಷ್ಟನೆ: ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಸ್ಫೋಟದ ಕುರಿತು ಅಮೆರಿಕಕ್ಕೆ ಮಾಹಿತಿ ನೀಡಿದ್ದಾರೆ. "ತಾಲಿಬಾನ್ ಜಾಗತಿಕ ಸಮುದಾಯದೊಂದಿಗೆ ಕಾರ್ಯ ನಿರ್ವಹಿಸಲು ಬದ್ಧವಾಗಿದೆ. ಅಫ್ಘಾನಿಸ್ತಾನದ ನೆಲದಲ್ಲಿ ಭಯೋತ್ಪಾದಕರಿಗೆ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ," ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಸ್ಪಷ್ಟನೆ ನೀಡಿದ್ದಾರೆ.