ಕಾಸರಗೋಡು: ಕಾಸರಗೋಡು ಜಿಲ್ಲೆಗೆ ಹೆಚ್ಚುವರಿ ವಾಕ್ಸಿನ್ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬಂದರು, ವಸ್ತು ಸಂಗ್ರಹಾಲಯ ಸಚಿವ ಅಹಮ್ಮದ್ ದೇವರ್ ಕೋವಿಲ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಸೋಮವಾರ ನಡೆದ ಅವಲೋಕನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಡಿ ಜಿಲ್ಲೆ ಎಂಬ ನಿಟ್ಟಿನಲ್ಲಿ ಹೆಚ್ಚುವರಿ ವಾಕ್ಸಿನ್ ಅನಿವಾರ್ಯವಾಗಿದ್ದು, ಈ ಬಗೆಗೆ ತಲೆದೋರಿರುವ ಗೊಂದಲ ಶೀಘ್ರದಲ್ಲಿ ಪರಿಹರಿಸಲಾಗುವುದು. ಕರ್ನಾಟಕ-ಕೇರಳ ಗಡಿ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರ ಸಮಕ್ಷದಲ್ಲಿ ಶೀಘ್ರದಲ್ಲೇ ಸಭೆ ನಡೆಸಲಾಗುವುದು. ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ಎಲ್ಲರ ಬೆಂಬಲ ಅಗತ್ಯವಿದೆ ಎಂದು ಸಚಿವ ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು ಮಾತನಾಡಿ ಆರೋಗ್ಯ ಇಲಾಖೆ ಸಹಿತ ಜಿಲ್ಲೆಯಲ್ಲಿ ಸಿಬ್ಬಂದಿಯ ಕೊರತೆ ಮುಗ್ಗಟ್ಟಿಗೆ ಕಾರಣವಾಗುತ್ತಿದೆ ಎಂದು ಸಚಿವರಿಗೆ ತಿಳಿಸಿದರು.
ಪರಿಶಿಷ್ಟ ಪಂಗಡ ವಲಯದಲ್ಲಿ ಆನ್ ಲೈನ್ ಮೂಲಕದ ಕಲಿಕೆಯಲ್ಲಿ ತಲೆದೋರಿರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿಧಾನಸಭೆ ಕ್ಷೇತ್ರ ಮಟ್ಟದ ಸಭೆ ಶೀಘ್ರದಲ್ಲೇ ನಡೆಸುವಂತೆ ಸಚಿವ ಆದೇಶಿಸಿದರು. ರಾಜಕೀಯ, ಸಾಮಾಜಿಕ, ಸ್ವಯಂ ಸೇವಾ ಸಂಘಟನೆಗಳ ಮುಖ್ಯಸ್ಥರ ಬೆಂಬಲ ಆನ್ ಲೈನ್ ಡಿಜಿಟಲ್ ಸೌಲಭ್ಯ ಗಳ ಲಭ್ಯತೆಗೆ ಖಚಿತಪಡಿಸಬೇಕು. ವನಾಂತರ ಪ್ರದೆಶಗಳ ಗಡಿಯಲ್ಲಿ ಕೇಬಲ್ ಸ್ಥಾಪನೆಗೆಇರುವ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಬಹುದಾಗಿದೆ. ವೈಫೈ ಸಂಪರ್ಕಗಳು ಈ ವಲಯಗಳಲ್ಲಿ ಹೆಚ್ಚು ಪೂರಕವಾಗಿವೆ. ಕಾಞಂಗಾಡಿನಲ್ಲಿ ತಾಯಿ ಮತ್ತು ಮಗು ಆಸ್ಪತ್ರೆ ಆರಂಭಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವೆಯೊಂದಿಗೆ ಮಾತುಕತೆ ನಡೆಸುವುದಾಗಿ ಸಚಿವ ನುಡಿದರು.
ಜಿಲ್ಲೆಯ ವಾಕ್ಸಿನೇಷನ್ ಕ್ರಮಗಳನ್ನು ತುರ್ತಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಜನಸಂಖ್ಯೆಗನುಗುಣವಾಗಿ ಲಸಿಕೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ವಾಕ್ಸಿನ್ ಡೋಸ್ ಗಳ ಶೇ 50 ಆನ್ ಲೈನ್ ನೋಂದಣಿ ಮೂಲಕ , ಶೇ 50 ಆಫ್ ಲೈನ್ ನೋಂದಣಿ ಮೂಲಕ ನಡೆಸುವ ಆದೇಶವನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುವುದು. ಜಿಲ್ಲೆಗೆ ಗರಿಷ್ಠ ಮಟ್ಟದಲ್ಲಿ ಹೆಚ್ಚುವರಿ ವಾಕ್ಸಿನ್ ಲಭ್ಯತೆ ವಿಚಾರವನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದು ಸಭೆ ತಿಳಿಸಿದೆ.
ಶಾಸಕರಾದ ಎಂ.ರಾಜಗೋಪಾಲನ್, ಎನ್.ಎನೆಲ್ಲಿಕುನ್ನು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್, ಜಿಲ್ಲಾ ವೈದ್ಯಾಧಿಕಾರಿ ಡಾ.ಕೆ.ಆರ್.ರಾಜನ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್, ವಾಕ್ಸಿನ್ ನೋಡೆಲ್ ಅಧಿಕಾರಿ ಡಾ.ಮುರಳೀಧರ ನಲ್ಲೂರಾಯ, ಡಿ.ಡಿ.ಇ.ಕೆ.ವಿ.ಪುಷ್ಪಾ, ಸಹಾಯಕ ಜಿಲ್ಲಾಧಿಕಾರಿ ಕೆ.ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಆನ್ ಲೈನ್ ಮುಖಾಂತರ ಭಾಗವಹಿಸಿದರು.