ನವದೆಹಲಿ : ನಾಲ್ವರು ಕಾಶ್ಮೀರಿ ಪತ್ರಕರ್ತರ ಬಂಧನ ಮತ್ತು ಅವರ ವಿರುದ್ಧದ ಆರೋಪಗಳು ಹಾಗೂ 'ಕಾಶ್ಮೀರ ಟೈಮ್ಸ್'ನ ಮುಚ್ಚುಗಡೆ ಕ್ರಮಗಳಿಗೆ ಕಾನೂನಿನ ಆಧಾರವನ್ನು ವಿವರಿಸುವಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ನೇಮಿಸಿರುವ ಮಾನವ ಹಕ್ಕುಗಳ ತಜ್ಞರು ಭಾರತ ಸರಕಾರಕ್ಕೆ ಸೂಚಿಸಿದ್ದಾರೆ. ಈ ಕ್ರಮಗಳು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನಡಿ ಭಾರತದ ಬಾಧ್ಯತೆಗಳಿಗೆ ಅನುಗುಣವಾಗಿವೆಯೇ ಎಂಬ ಬಗ್ಗೆ ವಿವರಗಳನ್ನೂ ಕೋರಲಾಗಿದೆ.
ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಹಕ್ಕಿನ ಉತ್ತೇಜನ ಮತ್ತು ರಕ್ಷಣೆ ಕುರಿತು ಮಂಡಳಿಯಿಂದ ನೇಮಕಗೊಂಡಿರುವ ವಿಶೇಷ ವರದಿಗಾರ್ತಿ ಐರೀನ್ ಖಾನ್ ಮತ್ತು ನಿರಂಕುಶ ಬಂಧನ ಕುರಿತು ಕಾರ್ಯಪಡೆಯ ಉಪಾಧ್ಯಕ್ಷೆ ಎಲಿನಾ ಸ್ಟೀನರ್ಟ್ ಅವರು ಭಾರತ ಸರಕಾರಕ್ಕೆ ಈ ಪತ್ರವನ್ನು ಬರೆದಿದ್ದಾರೆ. ಜೂ.3ರಂದು ಪತ್ರ ಬರೆಯಲಾಗಿದ್ದು,60 ದಿನಗಳ ಗಡುವು ಅಂತ್ಯಗೊಂಡ ಬಳಿಕ ಈ ತಿಂಗಳ ಪೂರ್ವಾರ್ಧದಲ್ಲಿ ಅದನ್ನು ಬಹಿರಂಗಗೊಳಿಸಲಾಗಿದೆ.
ಜಮ್ಮು-ಕಾಶ್ಮೀರದ ನಾಲ್ವರು ಪತ್ರಕರ್ತರಾದ ಫಹಾದ್ ಶಾ, ಆಕಿಬ್ ಜಾವೀದ್, ಸಜರ್ ಗುಲ್ ಮತ್ತು ಕಾಜಿ ಶಿಬ್ಲಿ ಅವರ ಕುರಿತು ವಿಶೇಷ ಕಳವಳಗಳನ್ನು ಪತ್ರದಲ್ಲಿ ವ್ಯಕ್ತಪಡಿಸಲಾಗಿದೆ.
'ನಮಗೆ ಲಭ್ಯವಾಗಿರುವ ಮಾಹಿತಿಯ ನಿಖರತೆಯ ಬಗ್ಗೆ ಪೂರ್ವನಿರ್ಣಯ ಕೈಗೊಳ್ಳಲು ನಾವು ಬಯಸಿಲ್ಲವಾದರೂ ಜಮ್ಮು-ಕಾಶ್ಮೀರದಲ್ಲಿಯ ಸ್ಥಿತಿಯ ಕುರಿತು ಈ ನಾಲ್ವರು ಪತ್ರಕರ್ತರ ವೃತ್ತಿಪರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವರದಿಯಾಗಿರುವ ಕಿರುಕುಳ ಮತ್ತು ನಿರಂಕುಶ ಎಂಬಂತೆ ಕಂಡುಬರುತ್ತಿರುವ ಬಂಧನಗಳು ಹಾಗೂ ಅವರ ವಿರುದ್ಧ ಕಾನೂನು ಕ್ರಮಗಳ ಬಗ್ಗೆ ನಾವು ಗಂಭೀರ ಕಳವಳಗಳನ್ನು ವ್ಯಕ್ತಪಡಿಸುತ್ತಿದ್ದೇವೆ 'ಎಂದು ಖಾನ್ ಮತ್ತು ಸ್ಟೀನರ್ಟ್ ಪತ್ರದಲ್ಲಿ ಬರೆದಿದ್ದಾರೆ.
ಕಾಶ್ಮೀರ ಟೈಮ್ಸ್ ನ ಕಚೇರಿಗಳನ್ನು ಮುಚ್ಚಿಸಿರುವ ಬಗ್ಗೆಯೂ ಗಾಢ ಕಳವಳಗಳನ್ನು ವ್ಯಕ್ತಪಡಿಸಿರುವ ಅವರು,ಈ ಕ್ರಮವು ಅದರ ಸ್ವತಂತ್ರ ಮತ್ತು ನೇರ ವರದಿಗಾರಿಕೆಗೆ ಸಂಬಂಧಿಸಿದಂತೆ ಕಂಡುಬರುತ್ತಿದೆ ಎಂದಿದ್ದಾರೆ. ಭಾರತ ಸರಕಾರವು ಪತ್ರಕ್ಕೆ ಇದುವರೆಗೂ ಉತ್ತರಿಸಿಲ್ಲ.
ಪತ್ರವು 2017,ಜೂನ್ ಮತ್ತು 2021,ಜನವರಿ ನಡುವೆ 'ದಿ ಕಾಶ್ಮೀರವಾಲಾ'ಸಾಪ್ತಾಹಿಕದ ಸಂಪಾದಕ ಫಹದ್ ಶಾ ಅವರಿಗೆ ಬೆದರಿಕೆಯ ಆರು ಪ್ರಕರಣಗಳನ್ನು ಉಲ್ಲೇಖಿಸಿದೆ.
ಕಳೆದ ವರ್ಷದ ಅ.3ರಂದು ಶಾ ಅವರನ್ನು ಕಾಜಿಗುಂದ್ ಪೊಲೀಸ್ ಠಾಣೆಯಲ್ಲಿ ನಾಲ್ಕು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆಯನ್ನು ನಡೆಸಿದ್ದ ಡಿವೈಎಸ್ಪಿ ದರ್ಜೆಯ ಅಧಿಕಾರಿ,'ಸ್ವಯಂ ಸಂಯಮ'ವನ್ನು ಪ್ರದರ್ಶಿಸುವಂತೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು 'ಎಚ್ಚರಿಕೆಯಿಂದ' ವರದಿ ಮಾಡುವಂತೆ ಶಾ ಅವರಿಗೆ ಎಚ್ಚರಿಕೆ ನೀಡಿದ್ದರು.
ಈ ವರ್ಷ, ಗಣರಾಜ್ಯೋತ್ಸವವನ್ನು ಆಚರಿಸುವಂತೆ ಶೋಪಿಯಾನ ಜಿಲ್ಲೆಯ ಶಾಲೆಯೊಂದರ ಮೇಲೆ ಅಧಿಕಾರಿಗಳು ಒತ್ತಡ ಹೇರಿದ್ದರು ಎಂಬ ವರದಿಯನ್ನು ಪ್ರಕಟಿಸಿದ್ದಕ್ಕೆ ಸಾಪ್ತಾಹಿಕದ ವಿರುದ್ಧ ದೂರು ದಾಖಲಾಗಿತ್ತು. ಶಾ ಮತ್ತು ಅವರ ಸಹೋದ್ಯೋಗಿಗಳು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಶೋಪಿಯಾನ್ ಜಿಲ್ಲಾ ನ್ಯಾಯಾಲಯವು ತಿರಸ್ಕರಿಸಿತ್ತು.
ಆಂಗ್ಲ ದೈನಿಕವೊಂದಕ್ಕಾಗಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕನೋರ್ವನ ಸಂದರ್ಶನಕ್ಕೆ ಸಂಬಂಧಿಸಿದಂತೆ ಆಕಿಬ್ ಜಾವೀದ್ ಅವರನ್ನು 2018,ಜುಲೈನಲ್ಲಿ ಬಂಧಿಸಿ,ಮೂರು ದಿನಗಳ ಕಾಲ ಪ್ರಶ್ನಿಸಿಲಾಗಿತ್ತು.
ಸರಕಾರ ವಿರೋಧಿ ಲೇಖನಗಳನ್ನು ಬರೆಯದಂತೆ ಎಚ್ಚರಿಕೆ ನೀಡುವ ಮೂಲಕ ಪೊಲೀಸರು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರ ಧ್ವನಿಯನ್ನು ಅಡಗಿಸುತ್ತಿರುವ ಬಗ್ಗೆ ಜಾವೀದ್ ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ವರದಿಯೊಂದನ್ನು ಪ್ರಕಟಿಸಿದ ಬಳಿಕ ಅವರಿಗೆ ಬೆದರಿಕೆಗಳು ಹೆಚ್ಚಿದ್ದವು.
ಫ್ರೀಲಾನ್ಸ್ ಪತ್ರಕರ್ತ ಸಜರ್ ಗುಲ್ ಮತ್ತು 'ದಿ ಕಾಶ್ಮೀರಿಯತ್' ಮ್ಯಾಗಝಿನ್ ಸಂಪಾದಕ ಕಾಜಿ ಶಿಬ್ಲಿ ಅವರ ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದನ್ನೂ ಮಾನವ ಹಕ್ಕುಗಳ ತಜ್ಞರ ಪತ್ರವು ಉಲ್ಲೇಖಿಸಿದೆ.
ಈ ಎಲ್ಲ ಪ್ರಕರಣಗಳಲ್ಲಿ ವಿಚಾರಣೆ ಸಂದರ್ಭ ಈ ಪತ್ರಕರ್ತರಿಗೆ ಕಾನೂನು ಪ್ರಾತಿನಿಧ್ಯಕ್ಕೆ ಅವಕಾಶವನ್ನು ನೀಡಲಾಗಿರಲಿಲ್ಲ ಎನ್ನುವುದನ್ನು ಪತ್ರವು ಬೆಟ್ಟುಮಾಡಿದೆ. ಕಾನೂನಿಗೆ ಅನುಗುಣವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೆ ಏಕಾಏಕಿಯಾಗಿ ಕಾಶ್ಮೀರ್ ಟೈಮ್ಸ್ ಕಚೇರಿಗಳನ್ನು ಮುಚ್ಚಿಸಿದ್ದನ್ನೂ ಪತ್ರವು ಪ್ರಸ್ತಾಪಿಸಿದೆ.