ಲಖನೌ: ಕಳೆದ ವರ್ಷ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವು ಕವಿಗಳಿಗೆ ಆಹ್ವಾನ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದ್ದರಿಂದ ಅಲಹಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯವು ಆಯೋಜಿಸಿದ್ದ 'ಮುಶೈರಾ' (ಕವಿಗೋಷ್ಠಿ) ರದ್ದುಗೊಳಿಸಲಾಗಿದೆ.
ಮೂಲಗಳ ಪ್ರಕಾರ, ಉತ್ತರ ಪ್ರದೇಶ ಉರ್ದು ಅಕಾಡೆಮಿ, ವಿಶ್ವವಿದ್ಯಾನಿಲಯದ ಉರ್ದು ವಿಭಾಗ ಮತ್ತು ಅದರ ಕೇಂದ್ರ ಸಾಂಸ್ಕೃತಿಕ ಸಮಿತಿಯು ಜಂಟಿಯಾಗಿ ವಿ.ವಿಯಲ್ಲಿ 'ಮುಶೈರಾ'ವನ್ನು ಶುಕ್ರವಾರ ಸಂಜೆ ಆಯೋಜಿಸಿದ್ದವು.
ಈ ಗೋಷ್ಠಿಯ ಔಪಚಾರಿಕ ಉದ್ಘಾಟನೆಗೆ ಕೆಲವು ನಿಮಿಷಗಳ ಮೊದಲು, ವಿಶ್ವವಿದ್ಯಾಲಯದ ಅಧಿಕಾರಿಗಳು ಯಾವುದೇ ಕಾರಣ ನೀಡದೆ ಕಾರ್ಯಕ್ರಮ ರದ್ದುಗೊಳಿಸುವುದಾಗಿ ಘೋಷಿಸಿದರು. ಆಗ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಕವಿಗಳು ಕವಿಗೋಷ್ಠಿಯಲ್ಲಿ ಆಸೀನರಾಗಿದ್ದರು.
ಕವಿಗೋಷ್ಠಿ ರದ್ದತಿಯ ಹಿಂದಿರುವ ಕಾರಣಗಳನ್ನು ಬಹಿರಂಗಪಡಿಸಲು ವಿಶ್ವವಿದ್ಯಾಲಯದ ಆಡಳಿತವು ನಿರಾಕರಿಸಿದರೂ, ಕೇಸರಿ ಸಂಘಟನೆಗಳ ಮತ್ತು ಬಿಜೆಪಿಯ ಕೆಲವು ನಾಯಕರು ದೆಹಲಿಯ ಶಾಹೀನ್ ಬಾಗ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವು ಕವಿಗಳ ಉಪಸ್ಥಿತಿಯನ್ನು ವಿರೋಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಕವಿಗೋಷ್ಠಿಗೆ ಆಹ್ವಾನಿಸಿದ್ದ ಕವಿಗಳಲ್ಲಿ ಕನಿಷ್ಠ ಇಬ್ಬರು ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಲ್ಲದೇ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು' ಎಂದು ಸ್ಥಳೀಯ ಬಿಜೆಪಿ ನಾಯಕರೊಬ್ಬರು ತಿಳಿಸಿದರು.
'ಆ ಇಬ್ಬರು ಕವಿಗಳ ಉಪಸ್ಥಿತಿ ವಿರೋಧಿಸಿ ಮತ್ತು ಕಾರ್ಯಕ್ರಮ ರದ್ದುಗೊಳಿಸುವಂತೆ ಒತ್ತಾಯಿಸಿ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಹಂಚಿಕೊಂಡ ನಂತರ ಈ ವಿಷಯವು ಮುಖ್ಯಮಂತ್ರಿ ಕಚೇರಿಗೆ ತಲುಪಿದೆ' ಎಂದು ಮೂಲಗಳು ತಿಳಿಸಿವೆ.
ಸಿಎಎ ವಿರುದ್ಧ ಮಹಿಳೆಯರು, ಅದರಲ್ಲೂ ಹೆಚ್ಚಾಗಿ ಮುಸ್ಲಿಮರು ಶಾಹೀನ್ ಬಾಗ್‌ನಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು. ಡಿಸೆಂಬರ್ 2019ರಲ್ಲಿ ಆರಂಭವಾದ ಪ್ರತಿಭಟನೆಗಳು ನಾಲ್ಕು ತಿಂಗಳುಗಳ ಕಾಲ ನಡೆದವು.