ಮಥುರಾ: ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ದಿಲ್ಲಿ ನಿವಾಸದಲ್ಲಿ ನಿಷೇಧಿತ ಸಂಘಟನೆಯೊಂದಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿರುವುದರಿಂದ ಅವರ ವಿಚಾರಣೆಗೆ ಅನುಮತಿಸಬೇಕೆಂದು ಕೋರಿ ಉತ್ತರ ಪ್ರದೇಶದ ಎಸ್‍ಟಿಎಫ್ ಸಲ್ಲಿಸಿದ್ದ ಅರ್ಜಿಯನ್ನು ಮಥುರಾದ ನ್ಯಾಯಾಲಯ ವಜಾಗೊಳಿಸಿದೆ.
ಎಸ್‍ಟಿಎಫ್ ಮನವಿಯನ್ನು ತಿರಸ್ಕರಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಅನಿಲ್ ಕುಮಾರ್ ಪಾಂಡೆ, ಪ್ರಕರಣದ ಚಾರ್ಜ್ ಶೀಟ್ ಈಗಾಗಲೇ ಸಲ್ಲಿಕೆಯಾಗಿರುವುದರಿಂದ ಆರೋಪಿಯ ವಿಚಾರಣೆಗೆ ಮತ್ತೆ ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಕಪ್ಪನ್ ಅವರ ದಿಲ್ಲಿ ನಿವಾಸದ ಮೇಲೆ ಕಳೆದ ವರ್ಷದ ನವೆಂಬರ್ 11ರಂದು ದಾಳಿ ನಡೆಸಿದಾಗ ನಿಷೇಧಿತ ಉಗ್ರ ಸಂಘಟನೆ ಸಿಮಿ ಕುರಿತಾದ ಪುಸ್ತಕ ಹಾಗೂ ಕೆಲ ಕೈಬರಹದ ಟಿಪ್ಪಣಿಗಳು ಪತ್ತೆಯಾಗಿದ್ದವು ಎಂದು ಎಸ್‍ಟಿಎಫ್ ಹೇಳಿತ್ತು.
ದಾಖಲೆಯನ್ನು ಆಗ್ರಾದ ವಿಧಿವಿಜ್ಞಾನ ಪ್ರಯೋಗಾಗಲಯಕ್ಕೆ ಕಳುಹಿಸಿ ಪರೀಕ್ಷಿಸಿದಾಗ ಕಪ್ಪನ್ ಅವರ ಕೈಬರಹಕ್ಕೂ ಪುಸ್ತಕದಲ್ಲಿನ ಕೈಬರಹಕ್ಕೂ ತಾಳೆಯಾಗುತ್ತಿಲ್ಲ ಎಂಬ ವರದಿ ಬಂದಿದೆ ಈ ಕುರಿತು ವಿಚಾರಿಸಬೇಕು ಎಂದು ಎಸ್‍ಟಿಎಫ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿತ್ತು.
ಹತ್ರಸ್ ಸಾಮೂಹಿಕ ಅತ್ಯಾಚಾರ, ಕೊಲೆಯ ನಂತರ ಕಪ್ಪನ್ ಅವರು ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆಂಬ ಆರೋಪವನ್ನು ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಹೊರಿಸಿದ್ದಾರೆ. ಕಪ್ಪನ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹತ್ರಸ್‍ಗೆ ವರದಿ ಮಾಡಲೆಂದು ತೆರಳುತ್ತಿದ್ದ ವೇಳೆ ಅಕ್ಟೋಬರ್ 5, 2020ರಂದು ಅವರನ್ನು ಹಾಗೂ ಇತರ ಕೆಲವರನ್ನು ಬಂಧಿಸಲಾಗಿತ್ತು. ಹಾಗೂ ನಂತರ ಯುಎಪಿಎ ಮತ್ತು ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿತ್ತು.
ಜೂನ್ 17ರಂದು ಮಥುರಾದ ನ್ಯಾಯಾಲಯವು ಕಪ್ಪನ್ ಹಾಗೂ ಇತರ ಮೂವರ ವಿರುದ್ಧದ ಆರೋಪಗಳನ್ನು ಕೈಬಿಟ್ಟಿತ್ತು. ನಿಗದಿತ ಆರು ತಿಂಗಳುಗಳೊಗಾಗಿ ಪೊಲೀಸರು ಅವರ ವಿರುದ್ಧದ ತನಿಖೆ ಪೂರ್ಣಗೊಳಿಸಿರಲಿಲ್ಲ.