ನವದೆಹಲಿ: ಮಾನವಕಳ್ಳಸಾಗಣೆಯಲ್ಲಿ ತೊಡಗಿದ್ದ ಬಾಂಗ್ಲಾದೇಶಿಗಳಿಗೆ ಹಾಗೂ ದಂಧೆಯ ಸಂತ್ರಸ್ತರಿಗೆ ನಕಲಿ ಗುರುತಿನ ಚೀಟಿ ದಾಖಲೆ ಸೃಷ್ಟಿಸುತ್ತಿದ್ದ ಪ್ರಕರಣದಲ್ಲಿ ಎನ್‌ಎಇಐ ಶೋಧಕಾರ್ಯಾಚರಣೆ ನಡೆಸಿದೆ.
ಬೆಂಗಳೂರಿನ ರಾಮಮೂರ್ತಿ ನಗರದ ಎರಡು ಪ್ರದೇಶದಲ್ಲಿ ಎನ್‌ಐಎ ಶೋಧಕಾರ್ಯಾಚರಣೆ ನಡೆದಿದೆ.
ರಾಮಮೂರ್ತಿ ನಗರದಲ್ಲಿನ ಬಾಡಿಗೆ ಮನೆಯಲ್ಲಿದ್ದ ಬಾಂಗ್ಲಾದೇಶದ 7 ಮಹಿಳೆಯರು ಹಾಗೂ ಒಂದು ಮಗುವನ್ನು ಮಾನವ ಕಳ್ಳಸಾಗಣೆ ಜಾಲದಿಂದ ಜೂನ್ ನಲ್ಲಿ ರಕ್ಷಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಕಳ್ಳಸಾಗಣೆ ಜಾಲದ ಮೇಲೆ ಎನ್‌ಐಎ ದಾಳಿ ನಡೆದಿದೆ.
ನೌಕರಿ ಕೊಡಿಸುವ ಆಮಿಷವೊಡ್ಡಿ ಮಹಿಳೆಯರನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಬಳಿಕ ಆ ಮಹಿಳೆಯರನ್ನು ವೇಶ್ಯಾವಾಟಿಕೆಗೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶಿಗರ ಕಾಯ್ದೆ, ಮಾನವ ಕಳ್ಳಸಾಗಣೆ ತಡೆ ಕಾಯ್ದೆಯಡಿ ಎನ್‌ಐಎ ಪ್ರಕರಣವನ್ನು ಮರುದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದೆ. ಶೋಧಕಾರ್ಯಾಚರಣೆಯಲ್ಲಿ ದಾಖಲೆಗಳು, 6 ಡಿಜಿಟಲ್ ಡಿವೈಸ್ ಗಳು, ಹಾರ್ಡ್ ಡಿಸ್ಕ್ ಗಳು, ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.