ತಿರುವನಂತಪುರ: ಪಿಎಸ್‍ಸಿ(ಕೇರಳ ಲೋಕಸೇವಾ ಆಯೋಗ) ರ್ಯಾಂಕ್ ಪಟ್ಟಿಗಳ ಅವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನ ಸಭೆಯಲ್ಲಿ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಶಾಸಕ ಶಾಫಿ ಪರಮಪಿಲ್ ಅವರು ಸಲ್ಲಿಸಿದ ತುರ್ತು ನೋಟಿಸ್ ಗೆ ಮುಖ್ಯಮಂತ್ರಿ ಉತ್ತರಿಸಿ ಮಾಹಿತಿ ನೀಡಿದರು. ಮುಖ್ಯಮಂತ್ರಿಯ ಹೇಳಿಕೆ ನೀಡುತ್ತಿದ್ದ ಬೆನ್ನಿಗೇ ರಾಜ್ಯ ಸೆಕ್ರಟರಿಯೇಟ್ ಎದುರು ಪ್ರತಿಭಟನಾ ನಿರತರಾಗಿದ್ದ ಮಹಿಳಾ ರ್ಯಾಂಕ್ ಲಿಸ್ಟ್ ಲ್ಲಿ ಹೆಸರಿರುವ ಮಹಿಳಾ ಉದ್ಯೋಗಾರ್ಥಿಗಳು ಮುಷ್ಕರ ತೀವ್ರಗೊಳಿಸಿದ್ದು, ಅವರು ತಮ್ಮ ಕೂದಲನ್ನು ಕತ್ತರಿಸುವ ಮೂಲಕ ಪ್ರತಿಭಟಿಸಿದರು.
ಕಳೆದ ಮೂರು ವರ್ಷಗಳ ಪಟ್ಟಿಯನ್ನು ವಿಸ್ತರಿಸಲು ಮಿತಿಗಳಿವೆ ಎಂದು ಮುಖ್ಯಮಂತ್ರಿ ವಿಧಾನ ಸಭೆಯಲ್ಲಿ ಹೇಳಿದರು. ತುರ್ತು ನಿರ್ಣಯಕ್ಕೆ ಅನುಮತಿ ನಿರಾಕರಿಸಿದ ನಂತರ ಪ್ರತಿಪಕ್ಷಗಳು ವಿಧಾನಸಭೆಯಿಂದ ಹೊರನಡೆದವು. ಬುಧವಾರ ಕೊನೆಗೊಳ್ಳುವ ಪ್ರತಿಯೊಂದು ಪಟ್ಟಿಯು ಮೂರು ವರ್ಷ ಹಳೆಯದು. ಈ ಕಾರಣದಿಂದ ರ್ಯಾಂಕ್ ಲೀಸ್ಟ್ ಕಾಲಾವಧಿಯನ್ನು ವಿಸ್ತರಿಸದಿದ್ದರೆ ನೂರಾರು ಉದ್ಯೋಗಾರ್ಥಿಗಳು ಭವಿಷ್ಯ ಕಳಕೊಳ್ಳವರೆಂದು ಪ್ರತಿಪಕ್ಷಗಳು ಕಳವಳ ವ್ಯಕ್ತಪಡಿಸಿದೆ.
ಸರ್ಕಾರದ ಕಡೆಯಿಂದ ನ್ಯಾಯದ ನಿರಾಕರಣೆ ಇದೆ ಎಂದು ಸೂಚಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಕಳೆದ 15 ದಿನಗಳಿಂದ ಸೆಕ್ರೆಟರಿಯೇಟ್ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಸೋಮವಾರ ಮುಖ್ಯಮಂತ್ರಿ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮುಷ್ಕರವನ್ನು ತೀವ್ರಗೊಳಿಸಲು ತಯಾರಿ ನಡೆಸಿದ್ದಾರೆ.
ಜೊತೆಗೆ ಸರ್ಕಾರಕ್ಕೆ ಈ ಸನನಿವೇಶ ಭಾರೀ ಸವಾಲಿನದ್ದೇ ಆಗಿದೆ. ಹಳೆಯ ರ್ಯಾಂಕ್ ಲೀಸ್ಟ್ ವಿಸ್ತರಿಸಿದರೆ, ಆ ಬಳಿಕ ಪರೀಕ್ಷೆ ಬರೆದ ಅನೇಕರ ಭವಿಷ್ಯವೂ ಅತಂತ್ರಗೊಳ್ಲಲಿದೆ. ಹಳೆಯ ಪಟ್ಟಿಯನ್ನು ಉಳಿಸಿ, ಹೊಸಬರಿಗೂ ಅವಕಾಶ ನೀಡುವ ಬಗ್ಗೆ ಸರ್ಕಾರ ಚಿಂತಿಸಬಹುದಾದರೂ, ಇನ್ನೂ ಅನೇಕ ಇಲಾಖೆಗಳಿಂದ ಖಾಲಿ ಇರುವ ಹುದ್ದೆಗಳ ಸಂಪೂರ್ಣ ಮಾಹಿತಿ ಲಭ್ಯವಾಗದಿರುವುದು ಸಮಸ್ಯೆಯಾಗಿದೆ.