ಉಪ್ಪಳ: ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಮುಂದಿನ ಪೀಳಿಗೆಗೆ ಮರಗಿಡಗಳನ್ನು ಬೆಳೆಸುವ ಮತ್ತು ಪರಿಚಯಿಸುವ ಕೆಲಸ ನಮ್ಮೆಲ್ಲರ ಹೊಣೆ. ಹಸಿರೇ ಉಸಿರು ಎಂಬ ಉಕ್ತಿ ಅತ್ಯಂತ ಮಹತ್ವಪೂರ್ಣವಾದುದು. ಜಲ ಸಂರಕ್ಷಣೆಗೆ ಔಷಧೀಯ ಗಿಡಗಳು ಪೂರಕ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ ತಿಳಿಸಿದರು.
ಪೈವಳಿಕೆ ಲಾಲ್‍ಬಾಗ್ ಬೋಳಂಗಳದಲ್ಲಿ ಒಡಿಯೂರು ಶ್ರೀ ಗಳವರ ಷಷ್ಟ್ಯಬ್ದ ಸಂಭ್ರಮ ಸಮಿತಿ ಪೈವಳಿಕೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು, ಪೈವಳಿಕೆ ವಲಯ, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಇದರ ಸಹಭಾಗಿತ್ವದಲ್ಲಿ ಗುರುವಾರ ನಡೆದ ನಕ್ಷತ್ರ ವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಪೈವಳಿಕೆ ಅರಮನೆಯ ರಂಗತ್ರೈ ಅರಸರು ದೀಪಪ್ರಜ್ವಲನೆಗೈದು ಉದ್ಘಾಟಿಸಿದರು. ಮಂಜೇಶ್ವರ ವಲಯ ಗೌರವಾಧ್ಯಕ್ಷ ಡಾ. ಶ್ರೀಧರ ಭಟ್ ಉಪ್ಪಳ ಅಧ್ಯಕ್ಷತೆ ವಹಿಸಿದ ಸಭಯಲ್ಲಿ ಒಡಿಯೂರು ಶ್ರೀಗಳವರ ಷಷ್ಟ್ಯಬ್ದ ಸಂಭ್ರಮ ಕೇಂದ್ರ ಸಮಿತಿ ಕಾರ್ಯದರ್ಶಿ ಯಶವಂತ ವಿಟ್ಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಜಿಲ್ಲೆಯ ಯೋಜನಾಧಿಕಾರಿ ಮುಖೇಶ್, ಷಷ್ಟ್ಯಬ್ದ ಸಂಭ್ರಮ ಸಮಿತಿ ವಲಯಾಧ್ಯಕ್ಷ ಶಶಿಧರ ಶೆಟ್ಟಿ ಜಮ್ಮದ ಮನೆ,ಸದಾಶಿವ ದೇವಸ್ಥಾನ ಅಂಬಾರು ಆಡಳಿತ ಮೊಕ್ತೇಸರ ಕೃಷ್ಣಪ್ಪ ಪೂಜಾರಿ ದೇರಂಬಳ, ಮುಂಬಯಿ ಉದ್ಯಮಿ ಯತೀಶ್ ಭಂಡಾರಿ ಕೌಡೂರು ಬೀಡು, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಅಶ್ವತ್ಥ ಪೂಜಾರಿ ಲಾಲ್ ಬಾಗ್, ಷಷ್ಟ್ಯಬ್ದ ಸಂಭ್ರಮ ಕೇಂದ್ರ ಸಮಿತಿ ಕಾರ್ಯದರ್ಶಿ ಜಯಪ್ರಕಾಶ ಶೆಟ್ಟಿ ಎ ಉಪಸ್ಥಿತರಿದ್ದರು.
ಷಷ್ಟ್ಯಬ್ದ ಸಂಭ್ರಮ ಪೈವಳಿಕೆ ಸಮಿತಿ ಪ್ರಧಾನ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿ, ಕಾರ್ಯಾಧ್ಯಕ್ಷ ಲೋಹಿತ್ ಭಂಡಾರಿ ಕುರಿಯ ವಂದಿಸಿದರು. ಕು. ಸ್ವರ್ಣಲತ ಪ್ರಾರ್ಥನೆ ಹಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೈವಳಿಕೆ ವಲಯ ಮೇಲ್ವಿಚಾರಕ ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.