ನವದೆಹಲಿ: ಸಿಬಿಐ ಮಾಜಿ ನಿರ್ದೇಶಕ ಅಲೋಕ್ ವರ್ಮಾ ಅವರು ಅಧಿಕೃತ ಹುದ್ದೆಯನ್ನು ದುರುಪಯೋಗಪಡಿಸಿಕೊಂಡ ಮತ್ತು ಸಂಬಂಧಿತ ಸೇವಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕೇಂದ್ರ ಗೃಹ ಸಚಿವಾಲಯ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಗೃಹ ಸಚಿವಾಲಯವು ವರ್ಮಾ ವಿರುದ್ಧ ಅಗತ್ಯ ಶಿಸ್ತು ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ(ಡಿಒಪಿಟಿ) ಮತ್ತು ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಯ ನೋಡಲ್ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಅವರು ಹೇಳಿದ್ದಾರೆ.
ಈ ಕ್ರಮ ಅನುಮೋದನೆಗೊಂಡರೆ, ವರ್ಮಾ ಅವರ ಪಿಂಚಣಿ ಮತ್ತು ನಿವೃತ್ತಿ ಪ್ರಯೋಜನಗಳ ತಾತ್ಕಾಲಿಕ ಅಥವಾ ಶಾಶ್ವತ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1979ರ ಬ್ಯಾಚ್ ನ ಐಪಿಎಸ್(ನಿವೃತ್ತ) ಅಧಿಕಾರಿಯಾಗಿರುವ ವರ್ಮಾ ಅವರು ಸಿಬಿಐ ನಿರ್ದೇಶಕರಾಗಿದ್ದಾಗ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಗುಜರಾತ್-ಕೇಡರ್ ನ ಐಪಿಎಸ್ ಅಧಿಕಾರಿ ಮತ್ತು ಅವರ ಉಪ ನಿರ್ದೇಶಕ ರಾಕೇಶ್ ಅಸ್ಥಾನಾ ಜೊತೆ ತೀವ್ರ ಹೋರಾಟದಲ್ಲಿ ತೊಡಗಿದ್ದರು.
ವರ್ಮಾ ಮತ್ತು ಅಸ್ಥಾನ ಇಬ್ಬರೂ ಪರಸ್ಪರ ಭ್ರಷ್ಟಾಚಾರದ ಆರೋಪ ಮಾಡಿದ್ದರು.
ಅಸ್ಥಾನಾ ಈಗ ದೆಹಲಿ ಪೊಲೀಸ್ ಆಯುಕ್ತರಾಗಿದ್ದಾರೆ.