ನವದೆಹಲಿ: ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಹಾಗೂ ವಿಶ್ವಾಸಾರ್ಹ ಏಜೆನ್ಸಿಗಳಿಂದ ಮಾಹಿತಿ ಪಡೆದು, ಕೋವಿಡ್-19 ಪಿಡುಗಿನಿಂದಾಗಿ ಉದ್ಯೋಗ ಕಳೆದುಕೊಂಡವರ ಕುರಿತು ಸಮಗ್ರ ವರದಿ ಸಿದ್ಧಪಡಿಸುವಂತೆ ಕಾರ್ಮಿಕ ಸಚಿವಾಲಯಕ್ಕೆ ಕಾರ್ಮಿಕರ ಕುರಿತ ಸಂಸದೀಯ ಸ್ಥಾಯಿ ಸಮಿತಿ ಸೂಚಿಸಿದೆ.
'ಇಪಿಎಫ್‌ಒ ಹಾಗೂ ವಿವಿಧ ಏಜೆನ್ಸಿಗಳಿಂದ ಪಡೆಯುವ ಮಾಹಿತಿಯನ್ನು ಪರಿಷ್ಕರಿಸಿ ವರದಿಯನ್ನು ಸಿದ್ಧಪಡಿಸಿದರೆ ಮಾತ್ರ ಉದ್ಯೋಗ ನಷ್ಟ ಕುರಿತು ಸ್ಪಷ್ಟ ಚಿತ್ರಣ ಸಿಗುವುದು' ಎಂದು ಸಮಿತಿಯು ಕಳೆದ ವಾರ ಸಂಸತ್‌ನಲ್ಲಿ ಮಂಡಿಸಿರುವ ತನ್ನ 25ನೇ ವರದಿಯಲ್ಲಿ ಪ್ರತಿಪಾದಿಸಿದೆ.
'ಕೋವಿಡ್ ಪಿಡುಗಿನ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‌ಡೌನ್ ಜಾರಿಗೊಳಿಸಿದ್ದವು. ಇದರಿಂದ ಆರ್ಥಿಕ ಚಟುವಟಿಕೆಗಳು ಕೆಲಕಾಲ ಸ್ಥಗಿತಗೊಂಡಿದ್ದವು. ಉದ್ಯೋಗದ ಮೇಲೆ ಇದರ ನೇರ ಪರಿಣಾಮ ಉಂಟಾಗಿತ್ತು' ಎಂದು ವರದಿಯಲ್ಲಿ ವಿವರಿಸಲಾಗಿದೆ.
'2020-21ನೇ ಸಾಲಿನಲ್ಲಿ ಇಪಿಎಫ್‌ಒದಲ್ಲಿ ನೋಂದಣಿಯಾದ ವೇತನದಾರರ ಸಂಖ್ಯೆ 77.08 ಲಕ್ಷ ಇತ್ತು. ಇದರ ಹಿಂದಿನ ವರ್ಷ, 2019-20ರಲ್ಲಿ ನೋಂದಣಿಯಾಗಿದ್ದ ಉದ್ಯೋಗಿಗಳ ಸಂಖ್ಯೆ 78.58 ಲಕ್ಷ. ಕೋವಿಡ್ ಪಿಡುಗು ಬಾಧಿಸುತ್ತಿದ್ದರೂ, ಭವಿಷ್ಯ ನಿಧಿ ಸಂಘಟನೆಯಲ್ಲಿ ನೋಂದಣಿಯಾದ ವೇತನದಾರರ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬರದಿರುವುದು ಗಮನಾರ್ಹ' ಎಂದು ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.