ವಾಷಿಂಗ್ಟನ್: ಕೊರೊನಾ ಮೂಲದ ಕುರಿತು ಗಂಭೀರ ಮಾಹಿತಿಯನ್ನು ಚೀನಾ ಮುಚ್ಚಿಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಕೊರೊನಾ ಉಗಮದ ಬಗೆಗಿನ ನಿರ್ಣಾಯಕ ಮಾಹಿತಿಯನ್ನು ಚೀನಾ ಮುಚ್ಚಿಡುತ್ತಿದೆ. ಚೀನಾದ ಬಳಿ ಕೋವಿಡ್ ಉಗಮದ ಬಗ್ಗೆ ನಿರ್ಣಾಯಕ ಮಾಹಿತಿ ಲಭ್ಯವಿದೆ. ಆದರೂ, ಆರಂಭದಿಂದಲೇ ಚೀನಾದ ಸರ್ಕಾರಿ ಅಧಿಕಾರಿಗಳು ಅಂತಾರಾಷ್ಟ್ರೀಯ ತನಿಖಾಧಿಕಾರಿಗಳು ಮತ್ತು ಜಾಗತಿಕ ಸಾರ್ವಜನಿಕ ಆರೋಗ್ಯ ಸಮುದಾಯದ ಸದಸ್ಯರುಗಳಿಗೆ ಆ ಮಾಹಿತಿ ಸಿಗದಂತೆ ತಡೆಹಿಡಿದಿದ್ದಾರೆ ಎಂದು ಹೇಳಿದ್ದಾರೆ.
ಜಗತ್ತಿನ 220ಕ್ಕೂ ಹೆಚ್ಚು ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಮೂಲದ ಕುರಿತ ಗಂಭೀರ ವಿಚಾರವನ್ನು ಚೀನಾ ಮುಚ್ಚಿಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಗಂಭೀರ ಆರೋಪ ಮಾಡಿದ್ದಾರೆ.
'ಗುಪ್ತಚರ ಸಮುದಾಯ ಮತ್ತು ಜಾಗತಿಕ ವಿಜ್ಞಾನಿಗಳ ವಿಶ್ಲೇಷಣೆಯಲ್ಲಿ ಆರಂಭಿಕ ಕೋವಿಡ್-19 ಪ್ರಕರಣಗಳ ವೈದ್ಯಕೀಯ ಮಾದರಿಗಳು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಮಾಹಿತಿಯ ಕೊರತೆಯಿದೆ' ಎಂದು ಗುಪ್ತಚರ ವರದಿಯ ವರ್ಗೀಕರಿಸದ ಸಾರಾಂಶದಲ್ಲಿ ಹೇಳಲಾಗಿದೆ.
ಕೋವಿಡ್‌ನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಿದ್ದರೂ ಚೀನಾ, ಪಾರದರ್ಶಕತೆಯನ್ನು ತಿರಸ್ಕರಿಸುತ್ತಿದೆ. ಮಾಹಿತಿಯನ್ನು ತಡೆ ಹಿಡಿಯುತ್ತಿದೆ. ಕೊರೊನಾ ಉಗಮಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನೀಡುವಂತೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಗೆ ಸಹಕರಿಸುವಂತೆ ಮಿತ್ರ ರಾಷ್ಟ್ರಗಳೊಂದಿಗೆ ಸೇರಿ ಚೀನಾದ ಮೇಲೆ ಅಮೆರಿಕ ಒತ್ತಡ ಹೇರಲಿದೆ ಎಂದು ಬೈಡನ್ ಹೇಳಿದ್ದಾರೆ.
ವಾಷಿಂಗ್ಟನ್‌ನಲ್ಲಿರುವ ಚೀನಾದ ರಾಯಭಾರ ಕಚೇರಿಯು ಅಮೆರಿಕ ಗುಪ್ತಚರ ಸಮುದಾಯದ ಸಂಶೋಧನೆಗಳನ್ನು ಖಂಡಿಸಿದೆ. ಅಲ್ಲದೆ ಸಾಂಕ್ರಾಮಿಕ ರೋಗ ಮತ್ತು ಡಬ್ಲ್ಯುಎಚ್‌ಒ ತನಿಖೆಯನ್ನು ಸಮರ್ಥಿಸಿಕೊಂಡಿದೆ.
'ಅಮೆರಿಕ ಗುಪ್ತಚರ ಸಮುದಾಯದ ವರದಿಯು ಅಮೆರಿಕ ರಾಜಕೀಯ ಕುಶಲತೆಯ ತಪ್ಪು ಹಾದಿಯಲ್ಲಿ ಸಾಗಲು ಬಾಗಿದೆಯೆಂದು ತೋರಿಸುತ್ತದೆ. ಗುಪ್ತಚರ ಸಮುದಾಯದ ವರದಿಯು ಚೀನಾದ ಕಡೆಯಿಂದ ತಪ್ಪಿನ ಊಹೆಯನ್ನು ಆಧರಿಸಿದ್ದು, ಇದು ಚೀನಾವನ್ನು ಬಲಿಪಶು ಮಾಡಲು ಮಾತ್ರ ಯತ್ನಿಸಲಾಗುತ್ತಿದೆ ಎಂದು ಹೇಳಿದೆ.
ಕೊರೊನಾ ವೈರಾಣುವನ್ನು ಆಯುಧವಾಗಿ ಅಭಿವೃದ್ಧಿಪಡಿಸಲಾಗಿದೆ ಎಂಬ ವಿಚಾರವನ್ನು ಅಮೆರಿಕದ ಗುಪ್ತಚರ ಸಮುದಾಯವು ತಳ್ಳಿ ಹಾಕಿದೆ. ಅಲ್ಲದೆ, ಇತರೆ ಸಂಸ್ಥೆಗಳು ಕೂಡ ವೈರಾಣುವನ್ನು ಜೈವಿಕವಾಗಿ ಅಭಿವೃದ್ಧಿಪಡಿಸಿಲ್ಲ ಎಂದು ಹೇಳಿದೆ.
ಆದರೆ ಈ ಬಗ್ಗೆ ಅವರಿಗೂ ಸಂಪೂರ್ಣ ವಿಶ್ವಾಸವಿಲ್ಲ. ಕೋವಿಡ್ ಉಗಮದ ಬಗ್ಗೆ ವಿವಿಧ ಸಮುದಾಯಗಳು ಭಿನ್ನಭಿಪ್ರಾಯಗಳನ್ನು ವ್ಯಕ್ತಪಡಿಸಿವೆ. ರಾಷ್ಟ್ರೀಯ ಗುಪ್ತಚರ ಸಮಿತಿ ಸೇರಿದಂತೆ ಇತರೆ ನಾಲ್ಕು ಸಂಸ್ಥೆಗಳು ಕೋವಿಡ್ ಪ್ರಾಣಿಯಿಂದ ಉಗಮವಾಗಿದೆ ಎಂಬ ಸಿದ್ಧಾಂತವನ್ನು ಬೆಂಬಲಿಸಿದರೆ, ಇನ್ನೊಂದು ಸಂಸ್ಥೆಯು ಪ್ರಯೋಗಾಲಯದಲ್ಲಿ ವೈರಾಣು ಸೋರಿಕೆಯಾಗಿದೆ ಎಂದು ಹೇಳುತ್ತಿದೆ. ಇನ್ನುಳಿದ ಮೂರು ಸಂಸ್ಥೆಗಳು ಯಾವುದೇ ತೀರ್ಮಾನಕ್ಕೆ ಬಂದಿಲ್ಲ.
ಕೊರೊನಾ ಹುಟ್ಟಿನ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನಡೆಸುತ್ತಿರುವ ತನಿಖೆಯ ಕುರಿತು ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಚ್ಚರಿ ವಿಚಾರವೆಂದರೆ ಈ ಪಟ್ಟಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ನಿಕಟ ಸಂಪರ್ಕವಿರುವ ದೇಶಗಳ ತಜ್ಞರೇ ಸಂಸ್ಥೆಯ ತನಿಖಾ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಇದಕ್ಕೆ ಇಂಬು ನೀಡುವಂತೆ ಕೊರೊನಾ ವೈರಸ್ ವಿಚಾರವಾಗಿ ಅಮೆರಿಕ ಮತ್ತು ಚೀನಾ ನಡುವಿನ ಬಿಕ್ಕಟ್ಟು ಕೂಡ ಮುಂದುವರೆದಿದ್ದು, ಇಂತಹ ಪರಿಸ್ಥಿತಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತನಿಖೆಯಿಂದ ನಿಸ್ಪಕ್ಷಪಾತ ವರದಿ ಬರುತ್ತದೆಯೇ ಎಂದು ತಜ್ಞರು ಪ್ರಶ್ನಿಸುತ್ತಿದ್ದಾರೆ.
ಶೀಘ್ರದಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ ಮೂಲದ ಕುರಿತ ತನ್ನ 2ನೇ ಹಂತದ ತನಿಖೆಗೆ ಸಿದ್ಧತೆ ನಡೆಸುತ್ತಿರುವಂತೆಯೇ ಜಾಗತಿಕ ತಜ್ಞರ ತಂಡ ವಿಶ್ವ ಆರೋಗ್ಯ ಸಂಸ್ಥೆಯ ತನಿಖಾ ಪ್ರಸ್ತುತೆಯನ್ನು ಪ್ರಶ್ನೆ ಮಾಡುತ್ತಿದ್ದ, ದಿನಕಳೆದಂತೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ.