ಕಾಸರಗೋಡು: ಸಪ್ಲೈ ಕೋ ನೀಡುವ ಸಬ್ಸಿಡಿ ಸಾಮಾಗ್ರಿಗಳ ಖರೀದಿಗೆ ಪಡಿತರ ಚೀಟಿ ಮಾಲೀಕರೇ ತೆರಳಬೇಕಿಲ್ಲ. ಅವರ ಕುಟುಂಬದ ಸದಸ್ಯರಲ್ಲಿ ಒಬ್ಬರು ತೆರಳಿದರೆ ಸಾಕು ಎಂದು ಆಹಾರ ಸಚಿವ ನ್ಯಾಯವಾದಿ ಜಿ.ಆರ್.ಅನಿಲ್ ತಿಳಿಸಿದರು.
ಪ್ರತಿವಾರದ ಪೋನ್-ಇನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಚಿವ ಈ ವಿಚಾರ ತಿಳಿಸಿದರು.
ಕಾಸರಗೋಡು, ತ್ರಿಕರಿಪುರ ಕ್ಷೇತ್ರಗಳ ಕರಾವಳಿ ಪ್ರದೇಶಗಳಲ್ಲಿ ಸಂಚಾರಿ ಮಾವೇಲಿ ಸ್ಟೋರ್ ಗಳ ಚಟುವಟಿಕೆ ಬೇಕು ಎಂಬ ಆಗ್ರಹ ಈ ವೇಳೆ ಕೇಳಿಬಂತು. ಈ ವಿಚಾರದಲ್ಲಿ ಸ್ಥಳೀಯ ಶಾಸಕರೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವ ಭರವಸೆ ನೀಡಿದರು. ಕಳೆದ ಬಾರಿ ಮೀನುಗಾರರ ಕಿಟ್ ವಿತರಣೆಯಲ್ಲಿ ಕೊರತೆ ಸಂಭವಿಸಿದೆ ಎಂಬ ದೂರುಗಳು ಕೇಳಿಬಂದಿತ್ತು. ಈ ಬಾರಿ ಮೀನುಗಾರರ ಕಲ್ಯಾಣ ಮಮಡಳಿಯಿಂದ ಲಭಿಸಿದ ಪಟ್ಟಿ ಪ್ರಕಾರ ಎಲ್ಲರಿಗೂ ಕಿಟ್ ಒದಗಿಸುವುದಾಗಿ ಸಚಿವ ಭರವಸೆ ನೀಡಿದರು. ತಮ್ಮ ಪಡಿತರ ಚೀಟಿಯನ್ನು ಆದ್ಯತೆ ಪಟ್ಟಿಗೆ ಸೇರಿಸುವಂತೆ ಬಹುತೇಕ ಕರೆಗಳು ಬಂದಿದ್ದುವು. ಕಳೆದ ಬಾರಿ ಲಭಿಸಿದ್ದ ದೂರುಗಳನ್ನು ಪರಿಶೀಲಿಸಿ ಅರ್ಹರನ್ನು ಆದ್ಯತೆಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಬಾರಿಯೂ ಪರಿಶೀಲನೆ ನಡೆಸಲಾಗುವುದು ಎಂದವರು ತಿಳಿಸಿದರು.