ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಅವಳಿ ಆತ್ಮಾಹುತಿ ಬಾಂಬ್ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಹೊಣೆ ಹೊತ್ತುಕೊಂಡಿದೆ.
ಆ.26 ರಂದು ಅಮೆರಿಕ ನೇತೃತ್ವದಲ್ಲಿ ಸೇನಾ ಪಡೆಗಳ ಹಿಂತೆಗೆತ ಕಾರ್ಯಾಚರಣೆ ನಡೆಯುತ್ತಿದ್ದಾಗ ತಾಲೀಬಾನ್ ಆಡಳಿತವಿರುವ ಅಫ್ಘಾನಿಸ್ತಾನದಲ್ಲಿ ಈ ಅವಳಿ ಸ್ಫೋಟ ಸಂಭವಿಸಿತ್ತು.
ಸೈಟ್ ಮೇಲ್ವಿಚಾರಣೆ ಏಜೆನ್ಸಿ ಹೇಳುವ ಪ್ರಕಾರ " ಬಾಂಬರ್ ಗಳು ಎಲ್ಲಾ ಭದ್ರತಾ ತಡೆಗೋಡೆಗಳನ್ನೂ ದಾಟಿ ಅಮೆರಿಕ ಪಡೆಗಳಿರುವ ಪ್ರದೇಶಕ್ಕಿಂತ 16 ಅಡಿ ದೂರದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಕ್ಕೆ ಓರ್ವ ಬಾಂಬರ್ ಗೆ ಸಾಧ್ಯವಾಗಿದೆ" ಎಂದು ಉಗ್ರ ಸಂಘಟನೆಯ ಪ್ರಚಾರ ವಿಭಾಗ ಹೇಳಿದೆ.
ಹೇಳಿಕೆಯಲ್ಲಿ ಓರ್ವ ಬಾಂಬರ್ ಹಾಗೂ ಒಂದು ಸ್ಫೋಟದ ಬಗ್ಗೆಯಷ್ಟೇ ಮಾಹಿತಿ ನೀಡಲಾಗಿದೆ. ಆದರೆ ಘಟನೆಯಲ್ಲಿ ಕನಿಷ್ಟ 2 ಬಾಂಬ್ ಸ್ಫೋಟಗೊಂಡಿರುವುದು ಪತ್ತೆಯಾಗಿದೆ.
ಸೇನಾ ಪಡೆಗಳ ಸ್ಥಳಾಂತರಿಸುವಿಕೆಯಲ್ಲಿ ತೊಡಗಿರುವ ಅಮೆರಿಕ ಹಾಗೂ ಇತರ ಪಾಶ್ಚಿಮಾತ್ಯ ಶಕ್ತಿಗಳ ಮೇಲೆ ಐಎಸ್ಐ ನ ಪ್ರಾದೇಶಿಕ ಸಂಘಟನೆ ಆಫ್ಘಾನಿಸ್ತಾನದಲ್ಲಿ ದಾಳಿ ನಡೆಸಲಿದೆ ಎಂಬ ಮಾಹಿತಿ ಇತ್ತು. ಆಫ್ಘಾನಿಸ್ತಾನ ತಾಲೀಬಾನ್ ವಶವಾದಾಗಿನಿಂದಲೂ ದೇಶ ತೊರೆಯುವುದಕ್ಕಾಗಿ ಸಾವಿರಾರು ಮಂದಿ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಕಾಯುತ್ತಿದ್ದಾರೆ.