ತಿರುವನಂತಪುರಂ: ಕಳೆದ ಕೆಲವು ದಿನಗಳಿಂದ ದೇಶದ ಎಲ್ಲಾ ರಾಜ್ಯಗಳಿಗಿಂತ ಕೇರಳದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಲೇ ಸಾಗಿದೆ. ಹೀಗೆ ಏಕಾಏಕಿ ಕೊರೊನಾ ಏರಿಕೆಯಾದ ಬೆನ್ನಲ್ಲೇ ಜುಲೈ 29ರಂದು ಕೇಂದ್ರ ಸರ್ಕಾರ ಕೇರಳದಲ್ಲಿ ಪರಿಸ್ಥಿತಿ ಪರಿಶೀಲನೆಗೆ ಹಾಗೂ ಕೊರೊನಾ ನಿಯಂತ್ರಣಕ್ಕೆ ಸಲಹೆ ನೀಡಲು ತಜ್ಞರ ತಂಡವನ್ನು ಕಳುಹಿಸಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ. ಸುಜೀತ್ ಸಿಂಗ್ ನೇತೃತ್ವದ ತಂಡ ಪರಿಸ್ಥಿತಿ ಅವಲೋಕನ ನಡೆಸುವಂತೆ ಸೂಚಿಸಿದೆ. ಇದೀಗ ಕೇರಳದಲ್ಲಿನ ಕೊರೊನಾ ನಿಯಂತ್ರಣ ಕ್ರಮಗಳನ್ನು ಪರಿಶೀಲನೆ ನಡೆಸಿರುವ ತಂಡ ವರದಿ ಸಿದ್ಧಪಡಿಸಿದೆ.
ಕೇರಳದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಲು ಕಾರಣವೇನು? ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಏನೇನು ಕ್ರಮಗಳನ್ನು ತೆಗೆದುಕೊಂಡಿತ್ತು? ಕೊರೊನಾ ಪ್ರಕರಣಗಳ ಇಳಿಕೆಗೆ ಏನೇನು ಮಾಡಬೇಕು? ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬೆಲ್ಲಾ ಅಂಶಗಳನ್ನು ಉಲ್ಲೇಖಿಸಿದ್ದು, ಆ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಲಾಗಿದೆ.
ಕೇರಳದಲ್ಲಿ ಕೊರೊನಾ ಪ್ರಕರಣಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದ ಆರು ಜಿಲ್ಲೆಗಳಿಗೆ ಈ ಆರು ಸದಸ್ಯರ ತಂಡ ಭೇಟಿ ನೀಡಿದೆ. ಕೊರೊನಾ ಪ್ರಕರಣಗಳು ಏರಿಕೆಯಾಗಲು ಬಹುಮುಖ್ಯ ಕಾರಣ ಏನು ಎಂಬುದನ್ನು ಅಂದಾಜಿಸಿದೆ. ಜೊತೆಗೆ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳನ್ನು ಟೀಕಿಸಿದೆ. ಕೊರೊನಾ ನಿಯಂತ್ರಣದ ಕೇರಳ ಮಾದರಿ ಕಳಪೆಯಾಗಿದೆ ಎಂದು ಆರೋಪಿಸಿದೆ. ವರದಿಯಲ್ಲಿ ಕೇಂದ್ರ ತಂಡ ಯಾವ್ಯಾವ ಅಂಶಗಳನ್ನು ಉಲ್ಲೇಖಿಸಿದೆ?
ಕೇರಳದಲ್ಲಿ ಕೊರೊನಾ ಸೋಂಕಿಗೆ ತುತ್ತಾದ 85%ಗೂ ಹೆಚ್ಚು ಮಂದಿ ಮನೆಯಲ್ಲೇ ಇದ್ದಾರೆ. ಆದರೆ ಅವರ ಮೇಲೆ ನಿಗಾ ಇರಿಸಿಲ್ಲ. ಕೇರಳದಲ್ಲಿ ಬಹುಪಾಲು, ಒಂದು ಕುಟುಂಬದಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ಮಂದಿ ಇದ್ದಾರೆ. ಇದರಲ್ಲಿ ಸೋಂಕು ತಗುಲಿದವರೂ ಹೋಂ ಐಸೊಲೇಷನ್‌ನಲ್ಲಿ ಇರುತ್ತಿಲ್ಲ. ಈ ಮೂಲಕ ಕುಟುಂಬದ ಇತರೆ ಸದಸ್ಯರಿಗೂ ಸೋಂಕು ಹರಡುತ್ತಿದೆ. ಈ ಕುಟುಂಬದವರೂ ಹೊರಗೆ ತಿರುಗಾಡುತ್ತಿದ್ದು, ಇದು ಕೊರೊನಾ ಸೋಂಕು ಹರಡಲು ಕಾರಣವಾಗಿದೆ. ಕ್ವಾರಂಟೈನ್ ನಿಯಮಗಳನ್ನೂ ಪಾಲಿಸುವುದು ಕಾಣುತ್ತಿಲ್ಲ ಎಂದು ಕೇಂದ್ರ ತಂಡ ಆರೋಪಿಸಿದೆ.
"ಕೇರಳದಲ್ಲಿ ಹೆಚ್ಚಿದ ಸಾಂಕ್ರಾಮಿಕ ಆಯಾಸ"
ಕೇರಳದಲ್ಲಿ "ಸಾಂಕ್ರಾಮಿಕ ಆಯಾಸ" ಹೆಚ್ಚಾಗಿದೆ ಎಂದು ಕೇಂದ್ರ ತಂಡ ಉಲ್ಲೇಖಿಸಿದೆ. ಸಾಂಕ್ರಾಮಿಕ ಆಯಾಸ ಎಂದರೇನು? ಸಾಂಕ್ರಾಮಿಕ ಆಯಾಸ (Pandemic fatigue) ಎನ್ನುವುದು ಜಾಗತಿಕ ವಿದ್ಯಾಮಾನವಾಗಿದ್ದು, ಹಲವು ದೇಶಗಳಲ್ಲಿ ಜನರು ತಮ್ಮನ್ನು ಹಾಗೂ ಇತರರನ್ನು ವೈರಸ್‌ನಿಂದ ರಕ್ಷಿಸಿಕೊಳ್ಳಲು ಶಿಫಾರಸು ಮಾಡಲಾದ ನಡವಳಿಕೆಗಳನ್ನು ಅನುಸರಿಸುವುದರ ಬಗ್ಗೆ ನಿರಾಶೆ ಹೊಂದಿರುವುದನ್ನು "ಸಾಂಕ್ರಾಮಿಕ ಆಯಾಸ" ಎನ್ನಲಾಗಿದೆ. ಇದು ಕೇರಳದ ಜನರಲ್ಲಿ ಅತಿ ಹೆಚ್ಚು ಕಾಣಿಸುತ್ತಿದೆ ಎಂದು ಹೇಳಿದೆ.
"ಸಾಂಕ್ರಾಮಿಕ ಆಯಾಸ ಕಾಲಕ್ರಮೇಣ ಹೆಚ್ಚಾಗುತ್ತಾ ಹೋಗುತ್ತದೆ. ಸಾಂಸ್ಕೃತಿಕ, ಸಾಮಾಜಿಕ ವಾತಾವರಣದಿಂದ ಇದು ಪ್ರಭಾವಿತವಾಗಿರುತ್ತದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ವ್ಯಾಖ್ಯಾನಿಸಿದೆ.
ಕೊರೊನಾ ನಿಯಂತ್ರಣದ ಕಾರ್ಯತಂತ್ರವೇ ಸರಿಯಿಲ್ಲ
ಇಲ್ಲಿನ ಜನರು ಮಾಸ್ಕ್ ಕೂಡ ಧರಿಸುತ್ತಿಲ್ಲ. ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿರುವುದು ಕೊರೊನಾ ಪರೀಕ್ಷಾ ಪ್ರಮಾಣ. ರಾಜ್ಯದಲ್ಲಿ ಪರೀಕ್ಷಾ ಪ್ರಮಾಣ ಗಣನೀಯವಾಗಿ ತಗ್ಗಿದೆ. ಒಟ್ಟಾರೆ ಕೊರೊನಾ ನಿಯಂತ್ರಣಕ್ಕೆ ಕೇರಳ ಸರ್ಕಾರದ ಕಾರ್ಯತಂತ್ರ ಪೂರಕವಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಆರೋಗ್ಯ ಮೂಲಸೌಕರ್ಯ ತೀವ್ರ ಹದಗೆಟ್ಟಿದೆ. ಸೋಂಕಿತರ ಪತ್ತೆ ಕಾರ್ಯವೂ ಚುರುಕಾಗಿಲ್ಲ. ಇದು ಕೊರೊನಾ ಹರಡುವಿಕೆಗೆ ಬಹುಮುಖ್ಯ ಕಾರಣವಾಗಿದೆ. ಹೆಚ್ಚಿನ ಜನಸಂಖ್ಯೆಗೆ ಲಸಿಕೆಗಳನ್ನೂ ತ್ವರಿತವಾಗಿ ನೀಡಬೇಕಿದೆ ಎಂದು ಸಲಹೆ ನೀಡಿದೆ. ಹೆಚ್ಚು ಜನ ಒಂದೆಡೆ ಸೇರುವುದನ್ನು ತಡೆಗಟ್ಟಲು ಹಾಗೂ ಅದರಿಂದ ರೋಗ ಹರಡುವಿಕೆ ನಿಯಂತ್ರಣಕ್ಕೆ ಅಂಗಡಿಗಳ ಹಾಗೂ ಸಂಸ್ಥೆಗಳ ಕಾರ್ಯನಿರ್ವಹಣೆ ಸಮಯವನ್ನು ವಿಸ್ತರಿಸುವಂತೆ ತಿಳಿಸಿದೆ. ಕೇರಳದಲ್ಲಿ ಸೆರೊ ಪ್ರಿವಲೆನ್ಸ್ ಮಟ್ಟವೂ (ಸೋಂಕಿಗೆ ವಿರುದ್ಧವಾಗಿ ಪ್ರತಿಕಾಯಗಳನ್ನು ಹೊಂದಿರುವ ಪ್ರಮಾಣ) ಕಡಿಮೆಯಿರುವುದು ಕೊರೊನಾ ಸೋಂಕನ್ನು ಇನ್ನಷ್ಟು ಹರಡಿಸಬಹುದಾದ ಸಾಧ್ಯತೆಯಿದೆ. ರಾಜ್ಯದ ಜನಸಂಖ್ಯೆಯ ಕನಿಷ್ಠ ಶೇ 56ರಷ್ಟು ಮಂದಿ ಸೋಂಕಿಗೆ ತುತ್ತಾಗುವ ಸಾಧ್ಯತೆಯನ್ನು ಇದು ಸೂಚಿಸಿದ್ದು, ಎಚ್ಚೆತ್ತುಕೊಳ್ಳಬೇಕಿದೆ ಎಂದು ಎಚ್ಚರಿಕೆ ನೀಡಿದೆ.
ಸೋಂಕಿನ ಪ್ರಮಾಣವನ್ನು ಪತ್ತೆ ಹಚ್ಚುವ "R" ದರ, ಅಂದರೆ ಸೋಂಕಿನ ಪುನರುತ್ಪತ್ತಿ ದರ ಕೇರಳದಲ್ಲಿ ಹೆಚ್ಚಾಗಿದೆ. ರಾಷ್ಟ್ರೀಯ ಸರಾಸರಿಯಲ್ಲಿ ಈ ದರ 0.97 ಇದ್ದರೆ, ಕೇರಳ ಒಂದರಲ್ಲೇ ಇದು 1.27 ಇದೆ ಎಂದು ಎಚ್ಚರಿಕೆ ರವಾನಿಸಲಾಗಿದೆ.
"ತಜ್ಞರ ಸಲಹೆ ಮೀರಿ ನಡೆದುಕೊಂಡ ಸರ್ಕಾರ"
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಪಿಕೆ ಕೃಷ್ಣದಾಸ್ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ಸೋತಿದೆ. ಆಡಳಿತ ಪಕ್ಷ ಕೊರೊನಾ ನಿಯಂತ್ರಣ ಬಿಟ್ಟು ರಾಜಕೀಯ ಮಾಡುವುದರಲ್ಲೇ ತೊಡಗಿಕೊಂಡಿದೆ. ಬಕ್ರೀದ್ ಸಂದರ್ಭ ಕೊರೊನಾ ನಿರ್ಬಂಧ ಸಡಿಲಿಕೆ ಮಾಡುವುದು ಸರಿಯಲ್ಲ ಎಂದು ತಜ್ಞರು ಸಲಹೆ ಕೊಟ್ಟರೂ ಅದನ್ನು ತಿರಸ್ಕರಿಸಿ ಅವಕಾಶ ಮಾಡಿಕೊಡಲಾಯಿತು. ಈಗ ಜನರು ಇದರ ಫಲ ಅನುಭವಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಕೊರೊನಾ ನಿರ್ಬಂಧ ಸಡಿಲಿಸಿದ ಸರ್ಕಾರ
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಬುಧವಾರ ಕೇರಳ ಸರ್ಕಾರ ತನ್ನ ಕೊರೊನಾ ನಿರ್ವಹಣಾ ಕಾರ್ಯತಂತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ನಿರ್ಬಂಧಗಳನ್ನು ಕೊಂಚ ಸಡಿಲಗೊಳಿಸಿದೆ. ಅಂಗಡಿ ಮುಂಗಟ್ಟುಗಳನ್ನು ರಾತ್ರಿ 9ರವರೆಗೂ ತೆರೆಯಲು ಅವಕಾಶ ನೀಡಲಾಗಿದೆ. ಇದರಿಂದ ಜನಸಂದಣಿ ಸೇರುವುದು ತಪ್ಪುತ್ತದೆ ಎಂಬ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದೆ. ಕೇರಳ ಕೊವಿಡ್-19 ಮೂರನೇ ಅಲೆಯಲ್ಲಿ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಳ್ಳುವ ಕುರಿತು ಆತಂಕ ವ್ಯಕ್ತಗೊಂಡಿದೆ. ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 23,676 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.