ನವದೆಹಲಿ: ಕೇರಳದ ಕೊಟ್ಟಿಯೂರಿನಲ್ಲಿ ಮಹಿಳೆಯೊಬ್ಬರು ತನ್ನ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯನ್ನೇ ಮದುವೆಯಾಗಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.
ಈ ಪ್ರಕರಣದಡಿ 20 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಪಾದ್ರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೂಡ ನ್ಯಾಯಾಲಯವು ವಜಾಗೊಳಿಸಿದೆ.
'ತಾನು ಸಂತ್ರಸ್ತೆಯನ್ನು ಮದುವೆಯಾಗಬೇಕೆಂದು ಭಾವಿಸಿದ್ದೆ. ಆದರೆ ಅತ್ಯಾಚಾರದ ವೇಳೆ ಆಕೆ ಅಪ್ರಾಪ್ತೆಯಾಗಿದ್ದಳು. ಬಳಿಕ ಆಕೆ ಮಗುವಿಗೆ ಜನ್ಮ ನೀಡಿದಳು' ಎಂಬ ಕಾರಣ ನೀಡಿ ಮಾಜಿ ಪಾದ್ರಿಯು ಜಾಮೀನು ಅರ್ಜಿ ಸಲ್ಲಿಸಿದ್ದರು.
'ಈ ಸಂಬಂಧ ಹೈಕೋರ್ಟ್ ಪ್ರಜ್ಞಾಪೂರ್ವಕವಾಗಿ ನಿರ್ಧಾರ ಕೈಗೊಂಡಿದೆ. ನ್ಯಾಯಾಲಯವು ಅದರ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಇಚ್ಛಿಸುವುದಿಲ್ಲ' ಎಂದು ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ದಿನೇಶ್ ಮಾಹೇಶ್ವರಿ ಅವರ ಪೀಠವು ಹೇಳಿದೆ.
'ಮಾಜಿ ಪಾದ್ರಿಯನ್ನು ವರಿಸುವುದಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯು ವಿಚಾರಣಾ ನ್ಯಾಯಾಲಯದ ಕದ ತಟ್ಟಬಹುದು' ಎಂದೂ ಪೀಠ ಹೇಳಿದೆ.