ನವದೆಹಲಿ: ಕೊರೋನ ವೈರಸ್ ವಿರುದ್ಧ ರಕ್ಷಣೆ ಹೆಚ್ಚಿಸಲು 'ಬೂಸ್ಟರ್ ಶಾಟ್' ಎಂದು ಕರೆಯಲ್ಪಡುವ ಮೂರನೇ ಕೋವಿಡ್ -19 ಲಸಿಕೆ ಚುಚ್ಚುವ ಅಗತ್ಯತೆಯ ಬಗ್ಗೆ ಭಾರತವು ಈಗ ಸಾಕಷ್ಟು ಡೇಟಾವನ್ನು ಹೊಂದಿಲ್ಲ ಹಾಗೂ ಮುಂದಿನ ವರ್ಷದ ಆರಂಭದಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಶನಿವಾರ NDTVಗೆ ತಿಳಿಸಿದ್ದಾರೆ.
ವಿವಿಧ ಅಧ್ಯಯನಗಳು ಲಸಿಕೆಗಳ ಮೂರನೇ ಡೋಸ್ ನಿಂದ ಹೆಚ್ಚಿನ ಮಟ್ಟದ ರಕ್ಷಣಾತ್ಮಕ ಪ್ರತಿಕಾಯಗಳಿಗೆ ಕಾರಣವಾಗಲಿದೆ ಎಂದು ತೋರಿಸಿಕೊಟ್ಟ ಬಳಿಕ ಅಮೆರಿಕ, ಬ್ರಿಟನ್ ಹಾಗೂ ಇಸ್ರೇಲ್ ಸೇರಿದಂತೆ ಹಲವಾರು ದೇಶಗಳು ಕೊರೋನವೈರಸ್ ವಿರುದ್ಧ ಹೋರಾಡಲು ಬೂಸ್ಟರ್ ಲಸಿಕೆಗಳನ್ನು ನಿರ್ವಹಿಸಲು ಯೋಜಿಸುತ್ತಿದ್ದರೂ ಭಾರತದಲ್ಲಿನ ಡಾಟಾ, ಸದ್ಯ ಬೂಸ್ಟರ್ ಗಳ ಅಗತ್ಯವನ್ನು ಸೂಚಿಸುತ್ತಿಲ್ಲ ಎಂದು ಡಾ.ಗುಲೇರಿಯಾ ಹೇಳಿದ್ದಾರೆ.
"ಬೂಸ್ಟರ್ ಡೋಸ್ ಅಗತ್ಯವಿದೆ ಎಂದು ಹೇಳಲು ಈಗ ನಮ್ಮಲ್ಲಿ ಸಾಕಷ್ಟು ಡೇಟಾ ಇದೆ ಎಂದು ನಾನು ಭಾವಿಸುವುದಿಲ್ಲ. ವೃದ್ಧರು ಹಾಗೂ ಹೆಚ್ಚಿನ ಅಪಾಯದ ಗುಂಪುಗಳಿಗೆ ಕೂಡ ನಮ್ಮಲ್ಲಿ ಸಾಕಷ್ಟು ಡೇಟಾ ಇಲ್ಲ. ಲಸಿಕೆಗಳು ಒದಗಿಸುವ ರಕ್ಷಣೆಯ ಮಟ್ಟಗಳ ಕಲ್ಪನೆಯನ್ನು ನೀಡುವ ಡೇಟಾವನ್ನು ನಾವು ನಿಜವಾಗಿಯೂ ಹೊಂದಿರಬೇಕು. ಹೆಚ್ಚಿನ ಸಂಶೋಧನೆ ಅಗತ್ಯವಿದೆ ಹಾಗೂ ಇದು ಇನ್ನೂ ಕೆಲವು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಬಹುಶಃ ಮುಂದಿನ ವರ್ಷದ ಆರಂಭದ ವೇಳೆಗೆ ಯಾವ ರೀತಿಯ ಬೂಸ್ಟರ್ ಶಾಟ್‌ಗಳು ಹಾಗೂ ಯಾರಿಗೆ ಇದು ಬೇಕು ಎಂಬುದರ ಕುರಿತು ನಮ್ಮಲ್ಲಿ ಡೇಟಾ ಇರುತ್ತದೆ" ಎಂದು ಏಮ್ಸ್ ಮುಖ್ಯಸ್ಥರು ಹೇಳಿದರು.