ಕಾಸರಗೋಡು: ಕೇರಳ ಉಚ್ಚ ನ್ಯಾಯಾಲಯದಲ್ಲಿ ಪ್ರಸಿದ್ಧ ನ್ಯಾಯವಾದಿಗಳಾಗಿ, ಶಾಸಕರಾಗಿ, ಗಡಿನಾಡು ಕಾಸರಗೋಡಿನ ಕನ್ನಡಿಗರ ಹಕ್ಕುಗಳ ಸಂರಕ್ಷಣೆಗಾಗಿ ತನ್ನ ಜೀವನವನ್ನೇ ಸಮಾಜ ಸೇವೆಗಾಗಿ ಮುಡಿಪಾಗಿಟ್ಟಿದ್ದ ದಿ. ಉಬ್ರಂಗಳ ಪದ್ಮನಾಭ ಕುಣಿಕುಳ್ಳಾಯರು ಗಡಿನಾಡು ಕಾಸರಗೋಡಿನಲ್ಲಿ ಎಂದಿಗೂ ಪ್ರಾತಃಸ್ಮರಣೀಯರು ಎಂದು ಖ್ಯಾತ ಹಾಸ್ಯ ಬರಹಗಾರ, ನಿವೃತ್ತ ಶಿಕ್ಷಕ ವೈ. ಸತ್ಯನಾರಾಯಣ ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ದಿ. ಯು.ಪಿ. ಕುಣಿಕುಳ್ಳಾಯರ 17ನೇ ಪುಣ್ಯತಿಥಿಯಂದು ನಡೆದ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡಿನ ಕನ್ನಡಿಗರಿಗಾದ ಅನ್ಯಾಯವನ್ನು, ಸಂಕಟವನ್ನು ತನ್ನದೆಂದೇ ಪರಿಗಣಿಸಿ ಅಹೋರಾತ್ರಿ ದುಡಿದ ಅಜಾತಶತ್ರು, ಧೀಮಂತ ನಾಯಕ ಕುಣಿಕುಳ್ಳಾಯರನ್ನು ಕಾಸರಗೋಡಿನ ಕನ್ನಡಿಗರು ಎಂದಿಗೂ ಮರೆಯಬಾರದು. ಇಂದು ಸಾವಿರಾರು ಮಂದಿ ಅನುಭವಿಸುತ್ತಿರುವ ಭಾಷಾ ಅಲ್ಪಸಂಖ್ಯಾತ ಸವಲತ್ತುಗಳು ಒದಗಿಬರಲು ಅವರೇ ಕಾರಣ ಎಂಬುದನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ, ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ಎಸ್.ವಿ. ಭಟ್ ನೆನಪಿಸಿದರು.
ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಕೇರಳ ಲೋಕಸೇವಾ ಆಯೋಗದ ನಿವೃತ್ತ ಅಂಡರ್ ಸೆಕ್ರೆಟರಿ ಗಣೇಶ್ ಪ್ರಸಾದ ಪಾಣೂರು ಮಾತನಾಡಿ, ದಿ. ಯು.ಪಿ. ಕುಣಿಕುಳ್ಳಾಯರೊಂದಿಗೆ ಕನ್ನಡಿಗರ ವಿವಿಧ ಕಾರ್ಯಗಳಿಗಾಗಿ ತಿರುವನಂತಪುರದಲ್ಲಿ ವಿವಿಧ ಕಚೇರಿಗಳ ಮೆಟ್ಟಲು ಹತ್ತಿಳಿದ ಘಟನೆಗಳ ಮೆಲುಕು ಹಾಕಿದರು. ನಿವೃತ್ತ ಬ್ಯಾಂಕ್ ಪ್ರಬಂಧಕ ಮಹಾಲಿಂಗೇಶ್ವರ ಭಟ್ ಕುಣಿಕುಳ್ಳಾಯರೊಂದಿಗಿನ ತಮ್ಮ ಒಡನಾಟವನ್ನು ನೆನಪು ಮಾಡಿಕೊಂಡರು. ಹರಿಣಾಕ್ಷಿ ಅವರು ದಿ. ಯು.ಪಿ. ಕುಣಿಕುಳ್ಳಾಯರ ಕವನ ಸಂಕಲನದಿಂದ ಆಯ್ದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಕು. ವಿದ್ಯಾಸರಸ್ವತಿ ಮತ್ತು ಕು. ವಿನಯಪರಮೇಶ್ವರಿ ಪ್ರಾರ್ಥನೆ ಹಾಡಿದರು.