ತಿರುವನಂತಪುರಂ: ರಾಜ್ಯದಲ್ಲಿ ಕೋವಿಡ್ ಮತ್ತೆ ತೀವ್ರ ಹೆಚ್ಚಳಗೊಳ್ಳುತ್ತಿರುವ ಮಧ್ಯೆ ಯಾವುದೇ ನಿರ್ಬಂಧಗಳನ್ನು ವಿಧಿಸದಿರಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೋವಿಡ್ ಪರಿಶೀಲನಾ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈಗಿರುವ ನಿಬರ್ಂಧಗಳನ್ನು ಮುಂದುವರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾನುವಾರ ರಾಜ್ಯದಲ್ಲಿ ಲಾಕ್‍ಡೌನ್ ನ್ನು ಮತ್ತೆ ಮುಂದುವರಿಯಲಿದೆ. ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಭಾನುವಾರದ ಲಾಕ್‍ಡೌನ್‍ಗಳನ್ನು ಹಿಂಪಡೆಯಲಾಗಿತ್ತು.
ಸೋಂಕು ಹೆಚ್ಚಾಗಿರುವ ಪ್ರದೇಶಗಳಲ್ಲಿ ಮಾತ್ರ ನಿಯಂತ್ರಣ ಇರಲಿದೆ. ಅಂಗಡಿಗಳ ಕಾರ್ಯಚಟುವಟಿಕೆಗಳಿಗೆ ಈಗಿರುವ ವಿನಾಯಿತಿಗಳು ಮುಂದುವರಿಯುತ್ತವೆ. ಸ್ಥಳೀಯ ಆಧಾರದ ಮೇಲೆ ನಿಯಂತ್ರಣಗಳನ್ನು ಬಿಗಿಗೊಳಿಸಲು ಸರ್ಕಾರವು ಈ ಹಿಂದೆ ನಿರ್ಧರಿಸಿತ್ತು. ಬೀದಿಗಳು, ಮಾರುಕಟ್ಟೆಗಳು, ಬಂದರುಗಳು, ಮೀನುಗಾರಿಕಾ ಪ್ರದೇಶಗಳು, ಮಾಲ್‍ಗಳು, ವಸತಿ ಪ್ರದೇಶಗಳು, ಕಾರ್ಖಾನೆಗಳು, ಎಂಎಸ್‍ಎಂಇ ಘಟಕಗಳು, ಕಚೇರಿಗಳು, ಐಟಿ ಕಂಪನಿಗಳು, ಫ್ಲ್ಯಾಟ್‍ಗಳು, ಗೋದಾಮುಗಳು, ಕಾರ್ಯಾಗಾರಗಳು ಮತ್ತು ಹೆಚ್ಚಿನ ಕುಟುಂಬಗಳನ್ನು ಒಳಗೊಂಡಂತೆ ನಿಯಂತ್ರಣವು ಮೈಕ್ರೋ-ಕಂಟೈನ್‍ಮೆಂಟ್ ವಲಯದ ವ್ಯಾಪ್ತಿಯನ್ನು ಆಧರಿಸಿದೆ.
ಪರಿಶೀಲನಾ ಸಭೆಯಲ್ಲಿ ತೆಗೆದುಕೊಂಡ ಸಾಮಾನ್ಯ ನಿರ್ಧಾರದಂತೆ ಅಸ್ತಿತ್ವದಲ್ಲಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಈ ಹಿಂದೆ ಆರೋಗ್ಯ ಇಲಾಖೆ ಸೂಚಿಸಿದಂತೆ ಲಸಿಕೆ ವಿತರಣೆ ಮತ್ತು ಕೋವಿಡ್ ಪರೀಕ್ಷೆಗಳನ್ನು ಹೇಗೆ ಹೆಚ್ಚಿಸಬೇಕು, ಯಾವ್ಯಾವ ಕಾರ್ಯಸೂಚಿಗಳು ಬೇಕು ಎಂಬ ಬಗ್ಗೆ ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾಯಿತು.